Advertisement

Karkala ಪೇಟೆ ಸುತ್ತಮುತ್ತ ಬೀದಿನಾಯಿಗಳ ಹಾವಳಿ

02:41 PM Jan 01, 2025 | Team Udayavani |

ಕಾರ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೇಟೆಯಲ್ಲಿ ಅಲೆದಾಡುವ ಬೀದಿ ನಾಯಿಗಳು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಸಂಜೆ ಮತ್ತು ರಾತ್ರಿವೇಳೆ ಸಾರ್ವಜನಿಕರು ಓಡಾಡಲು ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ ಹುಚ್ಚು ನಾಯಿಗಳ ಭೀತಿಯೂ ಜನರಲ್ಲಿ ಹೆಚ್ಚಿದೆ. ರಾತ್ರಿವೇಳೆ ಕರ್ಕಶವಾಗಿ ಬೊಗಳುವುದು, ಗುಂಪು ಗುಂಪಾಗಿ ಸೇರಿಕೊಂಡು ಜಗಳವಾಡುವುದ, ಬೈಕ್‌ನಲ್ಲಿ ಓಗುವರಿಗೆ ಓಡಿಸಿಕೊಂಡು ಹೋಗುವುದು, ಯಾರಾದರೂ ಆಹಾರ ಪೊಟ್ಟಣದ ಪಾರ್ಸೆಲ್‌ಗ‌ಳನ್ನು ಹಿಡಿದುಕೊಂಡು ಹೋಗುತ್ತಿದ್ದರೆ ಅವರ ಮೇಲೆ ದಾಳಿ ಮಾಡುವುದು ಸಹಿತ ನಾನಾ ಅವಾಂತರಗಳು ಬೀದಿನಾಯಿಗಳಿಂದ ಸಂಭವಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೆಲವರೂ ಬೀದಿನಾಯಿಗಳ ರಂಪಾಟಕ್ಕೆ ಬೈಕ್‌ನಿಂದ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ಸಂಭವಿಸಿದೆ.

Advertisement

ಕೆಲವು ಬೀದಿನಾಯಿಗಳು ತೀರ ವಯಸ್ಸಾಗಿದ್ದು, ಚರ್ಮ ಸಂಬಂಧಿತ ಇನ್ನಿತರ ಕಾಯಿಲೆಗಳಿಂದ ಬಳಲುತಿದೆ. ಬೀದಿನಾಯಿಗಳ ಆರೋಗ್ಯದ ಬಗ್ಗೆಯೂ ಸಂಬಂಧಪಟ್ಟ ಇಲಾಖೆ ಗಮನವಹಿಸಬೇಕಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆಯೂ ಪುರಸಭೆ ಆಡಳಿತ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಬೀದಿ ನಾಯಿಗಳ ನಿಯಂತ್ರಣವೂ ಪುರಸಭೆಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಬೀದಿನಾಯಿಗಳ ಲಸಿಕೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್‌ಗೆ ಆಹ್ವಾನಿಸಿದಾಗಲೂ ಗುತ್ತಿಗೆ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ ಒಂದೆರಡು ಎನ್‌ಜಿಒ ಸಂಸ್ಥೆಗಳು ಮಾತ್ರವಿದ್ದು, ಇದು ಮಹಾನಗರಗಳಲ್ಲಿ ದೊಡ್ಡ ಯೋಜನೆಗಳನ್ನು ನಿರ್ವಹಿಸುವಾಗ ಸ್ಥಳೀಯ ಪುರಸಭೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂಬುದು ತಿಳಿದುಬಂದಿದೆ.

700ಕ್ಕೂ ಅಧಿಕ ನಾಯಿಗಳಿವೆ
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 700ಕ್ಕೂ ಅಧಿಕ ಬೀದಿನಾಯಿಗಳನ್ನು ಗುರುತಿಸಲಾಗಿದ್ದು, ಈಗಾಗಲೆ 300 ನಾಯಿಗಳಿಗೆ ಸಂತಾನಹರಣ ಪ್ರಕ್ರಿಯೆ ಕಳೆದ ಜೂನ್‌ ತಿಂಗಳಲ್ಲಿ ನಡೆಸಲಾಗಿದೆ ಎಂದು ಪುರಸಭೆ ಮಾಹಿತಿ ನೀಡಿದೆ. ಆ್ಯಂಟಿ ರೇಬಿಸ್‌ ಲಸಿಕೆ ಮತ್ತು ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲಾಗಿತ್ತು. ಇದಕ್ಕೆ ಪುರಸಭೆ ಪ್ರತೀ ಬೀದಿನಾಯಿಗೆ 1,650 ರೂ. ವ್ಯಯಿಸಿತ್ತು. ಪ್ರತೀವರ್ಷ ಸಂತಾನಶಕ್ತಿಹರಣ ಚಿಕಿತ್ಸೆ ನಡೆಸುತ್ತಿದ್ದರೂ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಸಹಿತ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಅಸಮಾಧಾನ ತೊಡಿಕೊಂಡಿದ್ದಾರೆ.

ವಲಸೆ ಬರುತ್ತಿರುವ ನಾಯಿಗಳು
ಗ್ರಾಮೀಣ ಭಾಗದಿಂದ ಆಗಾಗ ಬೀದಿ ನಾಯಿಗಳು ಆಹಾರ ಅರಸಿಕೊಂಡು ಪೇಟೆ, ಪಟ್ಟಣ ಭಾಗಕ್ಕೆ ಬಂದು ಸೇರಿಕೊಳ್ಳುತ್ತವೆ. ಆಹಾರ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುವಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಿರುತ್ತದೆ. ಈಗಾಗಲೆ ಸಂತಾನಹರಣ ಚಿಕಿತ್ಸೆ ನೀಡಿದ್ದರೂ ನಾಯಿಗಳ ಸಂಖ್ಯೆ ಹೆಚ್ಚಾಗಲು ಇದು ಒಂದು ಕಾರಣ ಇರುವ ಸಾಧ್ಯತೆ ಇರಬಹುದು ಎನ್ನಲಾಗುತ್ತಿದೆ. ಅಲ್ಲದೆ ನಾಯಿ ಮರಿಗಳನ್ನು ರಾತ್ರೋ ರಾತ್ರಿ ಕೆಲವರು ಅಲ್ಲಲ್ಲಿ ಬೀದಿಗಳಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಈ ಸಮಸ್ಯೆ ಹೆಚ್ಚಾಗಲು ಕಾರಣ ಇರಬಹುದು ಎನ್ನಲಾಗುತ್ತದೆ.

ಆಹಾರ ತ್ಯಾಜ್ಯ ಎಸೆಯದಿರಿ
ಆಹಾರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀದಿಬದಿ ಎಸೆಯುವ ಪ್ರಕ್ರಿಯೆ ನಿಲ್ಲಿಸಬೇಕು. ಕೆಲವು ಹೊಟೇಲ್‌ ಸಹಿತ, ಸಭೆ, ಸಮಾರಂಭ ನಡೆಸುವರು ಉಳಿದ ಆಹಾರ ತ್ಯಾಜ್ಯವನ್ನು ಎಸೆಯುವ ರಾತ್ರಿ ವೇಳೆ ಕೆಲವು ಪ್ರದೇಶಗಳಲ್ಲಿ ಎಸೆಯುವುದರಿಂದ ಬೀದಿನಾಯಿಗಳು ಇದನ್ನು ಸೇವಿಸಲು ಗುಂಪು ಗುಂಪಾಗಿ ಸೇರುತ್ತವೆ. ಪರಿಸರದ ಶುಚಿತ್ವಕ್ಕೂ ಇದು ಸಮಸ್ಯೆಯಾಗಿದೆ. ಪುರಸಭೆ ನಿಯಮಾನುಸಾರ ಹಸಿತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಪೇಟೆಯಲ್ಲಿ ನಡೆಯಬೇಕಿದೆ.

Advertisement

ಎಲ್ಲೆಲ್ಲಿ ಬೀದಿನಾಯಿಗಳಿವೆ ?
ಪುರಸಭಾ ವ್ಯಾಪ್ತಿಯ ಜೋಡುರಸ್ತೆ, ಬಂಗ್ಲೆಗುಡ್ಡೆ ಜಂಕ್ಷನ್‌, ಜರಿಗುಡ್ಡೆ, ಕಾಬೆಟ್ಟು, ಕರಿಯಕಲ್ಲು ಡಂಪಿಂಗ್‌ಯಾರ್ಡ್‌, ಗಾಂಧಿ ಮೈದಾನ ಬಳಿ, ಅನಂತಶಯನ, ಬಂಡಿಮಠ ಬಸ್‌ನಿಲ್ದಾಣ, ನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಸ್‌ ನಿಲ್ದಾಣ, ಪತ್ತೂಂಜಿಕಟ್ಟೆ, ತೆಳ್ಳಾರು ರಸ್ತೆ ಸಹಿತ ಮೊದಲಾದ ಕಡೆಗಳಲ್ಲಿ ಬೀದಿನಾಯಿಗಳು ಗುಂಪುಗುಂಪಾಗಿ ಓಡಾಡಿಕೊಂಡಿದ್ದು, ಇದರಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಪುರಸಭೆ ಸೂಕ್ತಕ್ರಮವಹಿಸಬೇಕು ಎಂದು ಪುರಸಭೆ ಸದಸ್ಯ ಅಶ್ಪಕ್‌ ಅಹಮ್ಮದ್‌ ಆಗ್ರಹಿಸಿದ್ದಾರೆ.

ನಿಯಂತ್ರಣಕ್ಕೆ ಕ್ರಮ
ಬೀದಿನಾಯಿಗಳ ನಿಯಂತ್ರಣಕ್ಕೆ ಪುರಸಭೆ ಕಾರ್ಯೋನ್ಮುಖವಾಗಿದೆ. ಬೀದಿನಾಯಿಗಳಿಗೆ ಲಸಿಕೆ ಮತ್ತು ಸಂತಾನಶಕ್ತಿಹರಣ ಚಿಕಿತ್ಸೆ ನಡೆಸಲು ರಾಜ್ಯದಲ್ಲಿ ನೋಂದಾಯಿತ ಎನ್‌ಜಿಒ ಗುತ್ತಿಗೆ ಸಂಸ್ಥೆ ಎರಡು ಮಾತ್ರ ಇರುವುದು. ಸರಕಾರದ ರೂಪಿಸಿದ ಎಲ್ಲ ಮಾರ್ಗಸೂಚಿ, ನಿಯಮಾವಳಿ ಪಾಲಿಸಿ, ಸೌಕರ್ಯ ಹೊಂದಿರುವ ಎನ್‌ಜಿಒ ಸಂಸ್ಥೆಗೆ ಮಾತ್ರ ಗುತ್ತಿಗೆ ನೀಡಲಾಗುತ್ತದೆ. ಸಂಬಂಧಪಟ್ಟ ಸಂಸ್ಥೆಗಳ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಹಸಿತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
– ಜ್ಯೋತೀಶ್ವರಿ, ಪರಿಸರ ಎಂಜಿನಿಯರ್‌, ಕಾರ್ಕಳ ಪುರಸಭೆ

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next