Advertisement

Mulki: ರಾಷ್ಟ್ರೀಯ ಹೆದ್ದಾರಿ; ಶೀಘ್ರ ಸರ್ವಿಸ್‌ ರಸ್ತೆ ಕಾಮಗಾರಿ

01:27 PM Jan 06, 2025 | Team Udayavani |

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯ ಮುಕ್ಕದಿಂದ ಹೆಜಮಾಡಿಯ ಆರಂಭದವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರಗತಿಯಲ್ಲಿ ನಡೆಸಲಾಗುವುದು ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಹೇಳಿದರು.

Advertisement

ಅವರು ರವಿವಾರ ಮೂಲ್ಕಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಸಹಿತ ವಿವಿಧ ಮೂಲಸೌಕರ್ಯಗಳ ಬಗ್ಗೆ ಸಮಲೋಚನೆ ನಡೆಸಿ ಮಾತನಾಡಿದರು.

ಇಲ್ಲಿ ಸಂಭವಿಸುವ  ಅಪಘಾತದ ಸಂಖ್ಯೆಯನ್ನು ಇಳಿಸುವ ಪ್ರಯತ್ನವಾಗಿ ಸರ್ವಿಸ್‌ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದರು. ಲೋಕಸಭಾ ಸದಸ್ಯರಾದ ಅನಂತರ ಮೊದಲ ಬಾರಿಗೆ ಮೂಲ್ಕಿಯ ಜನತೆಯ ಜತೆಗೆ ಮಾತುಕತೆ ನಡೆಸಿದ್ದು, ಮೂಲ್ಕಿ ನಗರ, ತಾಲೂಕಿನ ಅಗತ್ಯಗಳ ಬಗ್ಗೆ ಸಂಸದರೊಂದಿಗೆ ಹಲವಾರು ವಿಷಯಗಳು ಪ್ರಸ್ತಾವಗೊಂಡಿತು.

ಅಮೃತ್‌ ಜಲ ಯೋಜನೆ
ಮೂಲ್ಕಿಗೆ ಕೇಂದ್ರ ಸರಕಾರದ ಅಮೃತ್‌ ಜಲ ಯೋಜನೆಯ ಮೂಲಕ ಕುಡಿಯುವ ನೀರಿನ  ಯೋಜನೆ ಈಗಾಗಲೇ ಕಾರ್ಯಾಚರಣೆಯಲ್ಲಿದೆ. ಇದಕ್ಕೆ ಬೇಕಾದ ನಳ್ಳಿ ಸಂಪರ್ಕದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಜನರಿಗೆ ನಳ್ಳಿ ನೀರು ಸುಗಮವಾಗಿ ಸಿಗುವ ಭರವಸೆ ಇದೆ ಎಂದು ಕ್ಯಾ| ಚೌಟ ಹೇಳಿದರು.

ಮುಕ್ಕ – ಹೆಜಮಾಡಿ ಸಂಪರ್ಕದ ಸರ್ವಿಸ್‌ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೇ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರು ತಿಳಿಸಿದರು.

Advertisement

ವಿಶ್ವಕರ್ಮ ಯೋಜನೆಯ ಬಗ್ಗೆ ಬ್ಯಾಂಕಿನ ಮ್ಯಾನೇಜರ್‌ಗೆ ಸಂಪರ್ಕಿಸಿದಾಗ ಸ್ಪಂದಿಸುವುದಿಲ್ಲ ಎಂಬ ದೂರು ಸಂಸದರಲ್ಲಿ ಬಂದಾಗ ಈ ಬಗ್ಗೆ ಮಾಹಿತಿ ಕೊಡುವಂತೆ ದೂರುದಾರಿಗೆ ಹೇಳಿದರು.

ಹೆಜಮಾಡಿ ಟೋಲ್‌ನಲ್ಲಿ ಮೂಲ್ಕಿ ಪಾರ್ಕಿನ ಕಾರ್‌ ಮತ್ತು ಟೆಂಪೋಗಳಿಗೆ ವಿನಾಯಿತಿ ಕೊಡಿಸುವಂತೆ ಚಾಲಕ ಮಾಲಕ ಸಂಘದ ಅಧ್ಯಕ್ಷ ಪ್ರಕಾಶ್‌ ಶೆಣೈ ಸಂಘದ ಪರವಾಗಿ ಒತ್ತಾಯಿಸಿದರು. ನೀವು ನೀಡಿರುವ ಲಿಸ್ಟ್‌ ಸಂಬಂಧಿತರಿಗೆ ಕೊಟ್ಟಿದ್ದೇನೆ. ತತ್‌ಕ್ಷಣ ಈ ಬಗ್ಗೆ ಕ್ರಮ ಜರಗಿಸುವ ಭರವಸೆ ಸಂಸದರು ಇತ್ತರು.

ಮೂಲ್ಕಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್‌ ಪುತ್ರನ್‌ ಮೂಲ್ಕಿಯ ಹಲವಾರು ಮೂಲಸೌಕರ್ಯಗಳ ಬಗ್ಗೆ ಸಂಸದರಲ್ಲಿ ಮಾಹಿತಿ ನೀಡಿದರು. ಮೂಲ್ಕಿ ನಗರ ಪಂ. ಅಧ್ಯಕ್ಷ ಸತೀಶ್‌ ಅಂಚನ್‌, ಕಿಲ್ಪಾಡಿ ಪಂ. ಅಧ್ಯಕ್ಷ ವಿಕಾಸ್‌ ಶೆಟ್ಟಿ, ಅತಿಕಾರಿ ಬೆಟ್ಟು ಗ್ರಾ. ಪಂ.ಉಪಾಧ್ಯಕ್ಷ ಮನೋಹರ್‌ ಕೋಟ್ಯಾನ್‌, ಮೂಲ್ಕಿ ನ.ಪಂ.ಮಾಜಿ ಅಧ್ಯಕ್ಷ ಸುನೀಲ್‌ ಆಳ್ವ ಮುಂತಾದವರಿದ್ದರು.

ಎರಡನೇ ಪ್ಲಾಟ್‌ ಪಾರಂ ಬೇಡಿಕೆ
ಮೂಲ್ಕಿ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ ಪಾರಂ ಬೇಡಿಕೆ ಬಗ್ಗೆ ಮಾತನಾಡಿದ ಸಂಸದರು ಈ ಸಮಸ್ಯೆ ನನ್ನ ಗಮನದಲ್ಲಿದ್ದು ಸಂಬಂಧಿಸಿದ ಸಚಿವರ ಜತೆಗೆ ಮಾತುಕತೆಯೂ ನಡೆದಿದೆ. ಇದು ಕೊಂಕಣ್‌ ರೈಲ್ವೇ ಕಾರ್ಪೊರೇಶನ್‌ನ ಮೂಲಕ ನಡೆಯಬೇಕಾಗಿದ್ದು, ಕೊಂಕಣ್‌ ರೈಲ್ವೇ ಆರ್ಥಿಕವಾಗಿ ತೊಂದರೆಯಲ್ಲಿದೆ. ಇದ್ದರಿಂದ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಹಣದ ಕೊರತೆ ಇದೆ. ಇಂಡಿಯನ್‌ ರೈಲ್ವೇ ಮೂಲಕವೂ ಈ ರೀತಿಯ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವುದು ತಾಂತ್ರಿಕವಾಗಿ ಅಸಾಧ್ಯವಾಗಿದೆ. ಕೊಂಕಣ್‌ ರೈಲ್ವೇ ಅಭಿವೃದ್ಧಿಗೆ ಕೇವಲ 75 ಲಕ್ಷ ರೂ.ವನ್ನು ಬಿಡುಗಡೆಗೊಳಿಸಲಾಗಿದೆ ಇದರಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಅಸಾಧ್ಯ ಎಂದವರು ಹೇಳಿದರು.

ಮೂಲ್ಕಿಯಲ್ಲಿ ಸಿ.ಎಸ್‌ಟಿ. ಎಕ್ಸ್‌ಪ್ರೆಸ್‌ ರೈಲು ನಿಲುಗಡೆ
ಮೂಲ್ಕಿಯಲ್ಲಿ ಮಂಗಳೂರು -ಸಿ.ಎಸ್‌ಟಿ. ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಈಗಾಗಲೇ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಜನತೆಯ ಈಗಾಗಲೇ ಮನವಿ ಬಂದಿದೆ. ಇದರಿಂದ ಮೂಲ್ಕಿ ಆಸುಪಾಸಿನ ಹಾಗೂ ಉಡುಪಿ ಜಿಲ್ಲೆಯ ಕೆಲ ಪ್ರದೇಶಕ್ಕೂ ಪ್ರಯೋಜನ ಇರುವುದನ್ನು ಈಗಾಗಲೇ ಇಲಾಖೆಯ ಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಸೂಕ್ತ ನಿರ್ಧಾರಕ್ಕಾಗಿ ಸರಕಾರದಿಂದ ಆಗುವ ಎಲ್ಲ ಕೆಲಸಗಳನ್ನು ಮಾಡುವ ಭರವಸೆಯನ್ನು ಸಂಸದರು ನೀಡಿದರು.

ಕೊಂಕಣ್‌ ರೈಲು ಮಾರ್ಗದ ಅಭಿವೃದ್ಧಿಗೆ ಪೂರಕ
ಕೊಂಕಣ್‌ ರೈಲ್ವೇ ವಿಭಾಗವು ಇಂಡಿಯನ್‌ ರೈಲ್ವೇ ವಿಭಾಗ ಜತೆಗೆ ವೀಲೀನವಾದರೆ ನಮ್ಮಲ್ಲಿರುವ ಕೊಂಕಣ್‌ ರೈಲು ಮಾರ್ಗದ ಅಭಿವೃದ್ಧಿಗೆ ಪೂರಕವಾಗಲಿದೆ. ಕೇಂದ್ರ ಸರಕಾರ ಇದಕ್ಕೆ ಬದ್ದವಾಗಿದೆ. ಈ ಪ್ರಸ್ತಾಪವನ್ನು ಸಾರ್ವಜನಿಕರು ಒತ್ತಾಯಿಸಿ ರಾಜ್ಯ ಸರಕಾರಕ್ಕೆ ತಿಳಿಯ ಪಡಿಸುವುದು ಅಗತ್ಯ ಎಂದು ಕ್ಯಾ| ಚೌಟ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next