Advertisement

51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ

12:43 PM Jan 16, 2021 | Team Udayavani |

ಪಣಜಿ: ಶನಿವಾರದಿಂದ ಇಲ್ಲಿ ಆರಂಭಗೊಳ್ಳುತ್ತಿರುವ 51 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು[ಇಫಿ] ಕನ್ನಡದ ನಟ ಸುದೀಪ್‌ ಸಂಜೀವ್‌ ಉದ್ಘಾಟಿಸುವರು.

Advertisement

ಜನವರಿ 16 ರಿಂದ 24 ರವರೆಗೆ ಚಿತ್ರೋತ್ಸವ ನಡೆಯಲಿದೆ. ಯಾವಾಗಲೂ ನವೆಂಬರ್‌ 20-28 ರವರೆಗೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಉತ್ಸವವನ್ನು ಮುಂದೂಡಲಾಗಿತ್ತು.

ಲಭ್ಯ ಮಾಹಿತಿ ಪ್ರಕಾರ, ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು [ಇಫಿ] ಉದ್ಘಾಟಿಸುವ ಗೌರವ ಕನ್ನಡದ ನಟರಿಗೆ ಸಿಗುತ್ತಿರುವುದು ಇದೇ ಮೊದಲು. ಈ ಹಿಂದೆ 1980 ರಲ್ಲಿ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ನೆಲೆಯಾಗಿದ್ದ ಬಾಲಿವುಡ್‌ ನಟಿ ದೇವಿಕಾರಾಣಿ ಉದ್ಘಾಟಿಸಿದ್ದರು. ಆ ಬಳಿಕ 1992 ರಲ್ಲಿ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವವನ್ನು ಕನ್ನಡದ ಮೇರು ನಟ ಡಾ. ರಾಜಕುಮಾರ್‌ ಉದ್ಘಾಟಿಸಬೇಕಿತ್ತು. ಆದರೆ ಅದೇ ಸಂದರ್ಭದಲ್ಲಿ ಕಾವೇರಿ ವಿವಾದ ಭುಗಿಲೆದ್ದ ಕಾರಣ ಚಿತ್ರೋತ್ಸವದಲ್ಲಿ ಭಾಗವಹಿಸಿರಲಿಲ್ಲ.

ಯಾವಾಗಲೂ ಬಾಲಿವುಡ್‌ ನಟ-ನಟಿಯರನ್ನೇ ಈ ಗೌರವಕ್ಕೆ ಕರೆಯಲಾಗುತ್ತಿತ್ತು ಎಂಬ ಆಪಾದನೆಯನ್ನು ಚಿತ್ರೋತ್ಸವ ಇಲಾಖೆ ಎದುರಿಸುತ್ತಿತ್ತು.

Advertisement

ಉತ್ಸವವನ್ನು ನಟ ಸುದೀಪ್‌ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವ ಪ್ರಕಾಶ್‌ ಜಾವೇಡಕರ್‌ ಪಾಲ್ಗೊಳ್ಳುವರು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಿಳಿಸಿದರು.

ಒಟ್ಟು ಒಂಬತ್ತು ದಿನಗಳ ಚಿತ್ರೋತ್ಸವದಲ್ಲಿ ಸುಮಾರು  60 ದೇಶಗಳ 224 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೀವಮಾನ ಸಾಧನೆ ಪ್ರಶಸ್ತಿಯನ್ನು ಇಟಲಿಯ ಸಿನೆಛಾಯಾಗ್ರಾಹಕ ವಿಟೋರಿಯಾ ಸ್ಟೊರೇರಾ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಉದ್ಘಾಟನಾ ಸಮಾರಂಭವು ಡಾ. ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿದೆ. ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಡ್ಯಾನಿಷ್‌ ಚಿತ್ರ ನಿರ್ದೇಶಕ ಥಾಮಸ್‌ ವಿಂಟರ್‌ ಬರ್ಗ್‌ನ ‘ಅನದರ್‌ ರೌಂಡ್‌’ ಪ್ರದರ್ಶನಗೊಳ್ಳುತ್ತಿದ್ದು, ಸಮಾರೋಪ ಚಿತ್ರವಾಗಿ ಜಪಾನಿನ ಕಿಯೋಶಿ ಕುರಸೋವಾನ ‘ವೈಫ್‌ ಆಫ್‌ ಎ ಸ್ಪೈ’ ಪ್ರದರ್ಶನಗೊಳ್ಳಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಚಲನಚಿತ್ರೋತ್ಸವ ಹೈಬ್ರಿಡ್‌ ರೂಪದಲ್ಲಿರಲಿದ್ದು, ಸಿನಿಮಾ ಥಿಯೇಟರ್‌ಗಳಲ್ಲದೇ, ಆನ್‌ ಲೈನ್‌ ನೋಂದಣಿ [ವರ್ಚುವಲ್‌] ಮೂಲಕವೂ ಸಿನೆಮಾ ವೀಕ್ಷಿಸಬಹುದು.

ಕನ್ನಡದ ಪಿಂಕಿ ಎಲ್ಲಿ? :

ಕಂಟ್ರಿ ಫೋಕಸ್‌ ವಿಭಾಗದಡಿ ಬಾಂಗ್ಲಾದೇಶದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರೊಂದಿಗೆ ಭಾರತೀಯ ಪನೋರಮಾ ವಿಭಾಗದಡಿ ಪ್ರದರ್ಶಿತಗೊಳ್ಳುತ್ತಿರುವ 23 ಕಥಾ ವಿಭಾಗದ ಚಿತ್ರಗಳಲ್ಲಿ ಕನ್ನಡದ ಪಿಂಕಿ ಎಲ್ಲಿ ? [ನಿರ್ದೇಶನ : ಪೃಥ್ವಿ ಕೊಣನೂರು] ಪ್ರದರ್ಶನಗೊಳ್ಳಲಿದೆ. ಸಾಂದ್‌ ಕಿ ಆಂಖ್‌ [ಹಿಂದಿ] ಚಲನಚಿತ್ರ ಈ ವಿಭಾಗದ ಉದ್ಘಾಟನಾ ಚಿತ್ರವಾಗಿರಲಿದೆ

ಚಿತ್ರೋತ್ಸವಕ್ಕೆ ಗೋವಾದ ಪಣಜಿ ನಗರ ಸಿದ್ಧವಾಗಿದ್ದು, ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುವ ಸಂಭವವಿದೆ. ಹಾಗಾಗಿ ಆನ್‌ ಲೈನ್‌ ಮೂಲಕ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಚಿತ್ರೋತ್ಸವದ ಸುವರ್ಣ ವರ್ಷದ ಸಂಭ್ರಮವಾಗಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next