ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರ ಆಗಸ್ಟ್ 29ಕ್ಕೆ ಬಿಡುಗಡೆಯಾಗುತ್ತದೆ, ಅದಕ್ಕಿಂತ ಮುನ್ನ ಅಂದರೆ ಜು.27 ರಂದು ಚಿತ್ರದುರ್ಗದಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದೆ ಎಂದು ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಈಗ ಅವರ ಮುಖದಲ್ಲಿ ಬೇಸರ ಮೂಡಿದೆ. ಅದಕ್ಕೆ ಕಾರಣ ಸಿನಿಮಾ ಹಾಗೂ ಆಡಿಯೋ ಬಿಡುಗಡೆ ಮುಂದಕ್ಕೆ ಹೋಗಿದ್ದು. ಹೌದು, “ಪೈಲ್ವಾನ್’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಚಿತ್ರದ ಪ್ಯಾನ್ ಇಂಡಿಯಾ ರಿಲೀಸ್.
ನಿಮಗೆ ಗೊತ್ತಿರುವಂತೆ “ಪೈಲ್ವಾನ್’ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ, ಪ್ರಭಾಸ್ ನಟನೆಯ “ಸಾಹೋ’ ಚಿತ್ರ ಕೂಡಾ ಆಗಸ್ಟ್ 30ರಂದು ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. “ಬಾಹುಬಲಿ’ ಯಶಸ್ಸಿನ ನಂತರ ಬಿಡುಗಡೆಯಾಗುತ್ತಿರುವ ಪ್ರಭಾಸ್ ಚಿತ್ರ ಎಂಬುದು ಒಂದು ಕಾರಣವಾದರೆ, ಚಿತ್ರದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.
ಜೊತೆಗೆ “ಸಾಹೋ’ ಕೂಡಾ ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ, “ಪೈಲ್ವಾನ್’ಗೆ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಹಿಂದಿ ಹಾಗೂ ತೆಲುಗಿನಲ್ಲಿ ಚಿತ್ರಮಂದಿರ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ “ಪೈಲ್ವಾನ್’ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಹಾಗಾದರೆ, ಆಡಿಯೋ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು.
ಆಗಸ್ಟ್ 09 ಅಥವಾ 11 ರಂದು ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಪೈಲ್ವಾನ್’ ಬಿಡುಗಡೆ ಮುಂದಕ್ಕೆ ಹೋದ ಬಗ್ಗೆ ಮಾತನಾಡುವ ನಿರ್ದೇಶಕ ಕೃಷ್ಣ, “ಬಿಡುಗಡೆ ಮುಂದಕ್ಕೆ ಹೋಗಿರುವುದು ನಿಜ. ನಮ್ಮದು ಪ್ಯಾನ್ ಇಂಡಿಯಾ ರಿಲೀಸ್. ಮುಖ್ಯವಾಗಿ ಹಿಂದಿ ಹಾಗೂ ತೆಲುಗಿನಲ್ಲಿ ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಬೇಕಿತ್ತು. ಆದರೆ, “ಸಾಹೋ’ ಕೂಡಾ ಬಿಡುಗಡೆಯಾಗುತ್ತಿರುವುದರಿಂದ ನಾವು ಬಯಸಿದಷ್ಟು ಚಿತ್ರಮಂದಿರ ಸಿಗೋದು ಕಷ್ಟ.
ಜೊತೆಗೆ ಯಾವ ಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂಬ ಚರ್ಚೆಗಳು ಕೂಡಾ ನಡೆಯುತ್ತಿರುವುದರಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಹೊಸ ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಿದೆ’ ಎನ್ನುತ್ತಾರೆ. “ಪೈಲ್ವಾನ್’ ಚಿತ್ರದಲ್ಲಿ ಸುದೀಪ್, ಸುನೀಲ್ ಶೆಟ್ಟಿ, ಕಬೀರ್ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಕುಸ್ತಿ ಹಾಗೂ ಬಾಕ್ಸಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಬಾಕ್ಸಿಂಗ್ ಹಾಗೂ ಕುಸ್ತಿ ದೃಶ್ಯಗಳು ಚಿತ್ರದಲ್ಲಿರಲಿದೆ.