Advertisement

Padubidri Mahaganapathi ; “ಕಟ್ಟದಪ್ಪ ಪ್ರಿಯ’ ಪಡುಬಿದ್ರಿ ಗಣಪತಿ-ತಯಾರಿ ಹೇಗೆ?

11:46 AM Aug 08, 2023 | Team Udayavani |

ಪಡುಬಿದ್ರಿ: ಪಡುಬಿದ್ರಿ ಗಣಪತಿಯು “ಕಟ್ಟದಪ್ಪ’ (ಕಟಾಹಾ ಪೂಪ) ಪ್ರಿಯನಾಗಿದ್ದು ಆ. 11ಹಾಗೂ 12ರಂದು ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ಸನ್ನಿಧಾನದಲ್ಲಿ ಈ ಬಾರಿಯ ಸಾರ್ವಜನಿಕ ಅಪ್ಪ ಸೇವೆಯು ನಡೆಯಲಿದೆ.

Advertisement

ಮಳೆಗಾಲದಲ್ಲಿ ನೀರ ತೋಡುಗಳಿಗೆ “ಕಟ್ಟ'(ಒಡ್ಡು)ಗಳನ್ನು ಕಟ್ಟಿಕೊಂಡು ಗದ್ದೆಗಳಿಗೆ ನೀರೊಡ್ಡುತ್ತಿದ್ದರು. ಈ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಾಶ್ರಯವು ನಿರ್ವಿಘ್ನವಾಗಿ ದೊರೆಯಲೆಂದು ಗ್ರಾಮ ದೇವರಿಗೆ ಹರಕೆ ರೂಪದಲ್ಲಿ ರೈತಾಪಿ ವರ್ಗವು ಸಮರ್ಪಿಸುವ ಅಪ್ಪಸೇವೆಗೆ “ಕಟ್ಟದಪ್ಪ’ವೆಂಬ ಹೆಸರು ಬಂತೆನ್ನುವುದು ಪ್ರಚಲಿತವಿದೆ.

ಈ ಅಪ್ಪಕ್ಕೆ ಕಟಾಹಾಪೂಪವೆಂತಲೂ ಹೆಸರಿದ್ದು ದೊಡ್ಡ, ದೊಡ್ಡ ಕಟಾಹಗಳಲ್ಲಿ ಈ ಅಪ್ಪಗಳನ್ನು ಮಹಾಗಣಪತಿಗೆ
ಅರ್ಪಿಸುವುದರಿಂದಲೂ ಈ ಹೆಸರೂ ಚಾಲ್ತಿಯಲ್ಲಿದೆ. ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ ದೇಗುಲದಲ್ಲಿ ಸೇರುತ್ತಾರೆ.

ಸಾಮೂಹಿಕವಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಶ್ರೀ ಮಹಾಗಣಪತಿ ದೇವರಲ್ಲಿ ತಮ್ಮ ಧನ ಧಾನ್ಯ ಸಮೃದ್ಧಿಗಾಗಿ
ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ರಾತ್ರಿ ಪೂಜೆಯ ಸಂದರ್ಭದಲ್ಲಿನ ಈ ಸೇವೆಗಾಗಿ ಬೆಳಗ್ಗಿನಿಂದಲೇ ಬಾಣಸಿಗರು ದೊಡ್ಡ ದೊಡ್ಡ ಬಾಣಲೆಯಲ್ಲಿ ಅಪ್ಪ ತಯಾರಿಸುತ್ತಾರೆ. ಇವುಗಳನ್ನು ಮುಂದೆ ದೊಡ್ಡ ದೊಡ್ಡ ಕಟಾಹಗಳಲ್ಲಿ ತುಂಬಿ ಸಮರ್ಪಣೆ
ಗಾಗಿ ಅಣಿಗೊಳಿಸಲಾಗುತ್ತದೆ. ಪೂಜೆ, ಪ್ರಾರ್ಥನೆಗಳ ಬಳಿಕ ಸಾಮೂಹಿಕ ಪ್ರಸಾದ ವಿತರಣೆಯೂ ಆರಂಭಗೊಳ್ಳುತ್ತದೆ.

Advertisement

ಇತಿಹಾಸ:

ಅಪರಿಮಿತ ಖ್ಯಾತಿಯ “ಪೊಟ್ಟಪ್ಪ’ ಸೇವೆ ಬ್ರಿಟಿಷ್‌ ಅಧಿಕಾರಿಯೊಬ್ಬ ಗ್ರಾಮದಲ್ಲಿ ಸಂಚಾರಕ್ಕೆ ಕುದುರೆಯನ್ನೇರಿ ಬಂದಿದ್ದಾಗ
ಹೆದ್ದಾರಿಯಲ್ಲಿ ಸಾಗುತ್ತಿರಬೇಕಾದರೆ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲೇ ಕುದುರೆ ಆಯತಪ್ಪಿ ಬಿದ್ದಾಗ ಅಧಿಕಾರಿಯೂ ಕೆಳಕ್ಕೆ ಬೀಳುವಂತಾಯಿತು.

ಆಗ ಯಾಕೆ ಹೀಗಾಯಿತ್ತೆನ್ನುವ ಬಗೆಗೆ ವಿಚಾರಿಸಿಕೊಂಡ ಅಧಿಕಾರಿಗೆ ಪಡುಬಿದ್ರಿ ಗಣಪತಿಯ ದರ್ಶನವನ್ನು ತಾನು ಮಾಡಿಲ್ಲವೆಂಬ ತಪ್ಪಿನ ಅರಿವಾಗಿತ್ತಂತೆ. ಅಂದಿನಿಂದಲೇ ಆತನ ಫರ್ಮಾನಿನಂತೆಯೇ ಪಡುಬಿದ್ರಿ ಗಣಪತಿಗೆ ಬರೀ ಅಕ್ಕಿ, ತೆಂಗಿನಕಾಯಿ ಹಾಗೂ ಉಪ್ಪುಗಳ ಮಿಶ್ರಣಗಳುಳ್ಳ “ಪೊಟ್ಟಪ್ಪ’ ಸೇವೆಯೂ ನಿತ್ಯ ನಡೆಯುತ್ತಲೇ ಬಂದಿದೆ.

ತಯಾರಿ ಹೇಗೆ?
ಈ ಬಾರಿ 80 ಮುಡಿ ಅಕ್ಕಿಯ ಕಟ್ಟದಪ್ಪವು ಶ್ರೀ ಮಹಾಗಣಪತಿಗೆ ಸಮರ್ಪಿತವಾಗಲಿದೆ. ಈ ಅಕ್ಕಿಗೆ
180 ಕೆಜಿ ಅರಳು, ಸುಮಾರು 700 ಕೆಜಿ ಬಾಳೆಹಣ್ಣು, ಸುಮಾರು 2,000 ತೆಂಗಿನಕಾಯಿ, 10 ಕೆಜಿ ಏಲಕ್ಕಿ, 2.5 ಟನ್‌ ಬೆಲ್ಲಗಳ ಸೇರಿಸಿ ಮಿಶ್ರಣವನ್ನು ತಯಾರಿಸಿಕೊಳ್ಳುತ್ತಾರೆ.

ಮುಂಜಾನೆ‌ ವೇಳೆಗೇ ಈ ಎಲ್ಲ ತಯಾರಿಗಳೂ ನಡೆದು ಬೆಳಗ್ಗಿನಿಂದ ಸಾಯಂಕಾಲದವರೆಗೂ ಇದನ್ನು ಸುಮಾರು 60 ಡಬ್ಬಿ ಎಣ್ಣೆಯನ್ನು ಪೇರಿಸಿ ದೊಡ್ಡ ಬಾಣಲೆಗಳಲ್ಲಿ ಕಾಯಿಸಿಕೊಳ್ಳುತ್ತಾ ಸುಮಾರು 1.5 ಲಕ್ಷದಷ್ಟು ಕಟ್ಟದಪ್ಪಗಳನ್ನು ಬಾಣಸಿಗರು ತಯಾರಿಸುತ್ತಾರೆ. ಮುಖ್ಯ ಬಾಣಸಿಗರಾಗಿ ಪಡುಬಿದ್ರಿಯ ಯೋಗೀಶ್‌ ರಾವ್‌ ಅವರಿದ್ದು ವಿವಿಧೆಡೆಯ ಬಾಣಸಿಗರು ಸಹಕರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next