Advertisement

ಪರಿಶಿಷ್ಟರ ಮೀಸಲಾತಿಗೆ ಸುಗ್ರೀವಾಜ್ಞೆ ಬಲ: ಶೆಡ್ಯೂಲ್‌ 9ರ ಸೇರ್ಪಡೆ ಇಲ್ಲದೆ ಜಾರಿಗೆ ನಿರ್ಧಾರ

07:47 PM Oct 20, 2022 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಸುಗ್ರೀವಾಜ್ಞೆ  ಮೂಲಕ ಜಾರಿ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Advertisement

ಈ ಮೊದಲೇ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಕರಡು ವಿಧೇಯಕಕ್ಕೆ ಸಂಪುಟ ಸಭೆಯ ಒಪ್ಪಿಗೆ ಬಾಕಿ ಇತ್ತು. ಈ ಮಧ್ಯೆ, 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ನಿಯಮಾವಳಿ ಸಡಿಲಿಕೆ ಮಾಡಲೂ ಸಂಪುಟ ನಿರ್ಧಾರ ಮಾಡಿದೆ.

ಸಂಪುಟ ಸಭೆಯ ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಒಂದೆರಡು ದಿನಗಳಲ್ಲಿ ರಾಜ್ಯಪಾಲರ ಅಂಕಿತಕ್ಕೆ ರವಾನಿಸಲು ನಿರ್ಧರಿಸಲಾಗಿದೆ. ಬಳಿಕ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದವರಿಗೆ ಜನಸಂಖ್ಯೆ ಆಧರಿಸಿ ಮೀಸಲು ನೀಡಲು ಸಂವಿಧಾನದಲ್ಲಿ ಅವಕಾಶವಿದ್ದು, ಆ ಅಂಶದ ಆಧಾರದ ಮೇಲೆ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಇದಕ್ಕೆ ನ್ಯಾಯಾಲಯದಲ್ಲಿ ಯಾವುದೇ ರೀತಿಯ ಹಿನ್ನಡೆಯಾಗದು ಎಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟಾರೆ ಮೀಸಲು ನೀತಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರ್ಪಡೆ ಪ್ರಕ್ರಿಯೆಗೆ ಕಾಲಾವಕಾಶ ಹಿಡಿಯಲಿದೆ. ವಿಧಾನಮಂಡಲದಲ್ಲಿ ಅನುಮೋದನೆಯಾಗಿ ಬಳಿಕ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆಗಳೆಲ್ಲಾ ವಿಳಂಬವಾಗಲಿರುವುದರಿಂದ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಮೀಸಲಾತಿ ಸ್ಪಷ್ಟತೆ ಇಲ್ಲ:

ಈ ಮಧ್ಯೆ, ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರದಲ್ಲಿ ಸರ್ಕಾರದಲ್ಲೇ ಸ್ಪಷ್ಟತೆ ಇಲ್ಲ ಎಂಬಂತಾಗಿದೆ. ಸಂವಿಧಾನದ ಶೆಡ್ಯೂಲ್‌ 9 ಕ್ಕೆ ಸೇರ್ಪಡೆಯಾಗದೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಾಧ್ಯವೇ? ಯಾವ ಪ್ರವರ್ಗದ ಮೀಸಲಾತಿ ಪ್ರಮಾಣ ಕಡಿತವಾಗಲಿದೆ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಯಾವ ಪ್ರವರ್ಗದಿಂದ ಮೀಸಲಾತಿ ಕಡಿತಗೊಳಿಸಲಾಗುತ್ತಿದೆ? ಯಾವುದರದಲ್ಲಿ ಬದಲಾವಣೆಯಾಗಲಿದೆ ಎಂಬುದು ಮುಂದೆ ಗೊತ್ತಾಗಲಿದೆ ಎಂದಷ್ಟೇ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು :

ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಜಯಪುರದಲ್ಲಿ ಎ.ಟಿ.ಆರ್‌.72 ಮಾದರಿ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಏರ್‌ ಬಸ್‌-320 ಮಾದರಿಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೈರಿಸಲು ರೂ.347.92 ಕೋಟಿ ರೂ. ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ಸಹ ನೀಡಿದೆ. ಬಸವೇಶ್ವರ ಹೆಸರು ನಾಮಕರಣ ತೀರ್ಮಾನಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ  ಹರ್ಷ ವ್ಯಕ್ತಪಡಿಸಿದ್ದು ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಐತಿಹಾಸಿಕ ನಿರ್ಣಯಕ್ಕಾಗಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next