ಕೋಟ: ಹಾವೆಂದರೆ ಮಕ್ಕಳಿಗೆ ಭಯ. ಹೆತ್ತವರೂ ಮಕ್ಕಳನ್ನು ಹಾವಿ ನಿಂದ ದೂರ ಇಡುತ್ತಾರೆ. ಆದರೆ ಸಾಲಿಗ್ರಾಮದ ಇಲ್ಲಿನ ಎನಿಮಲ್ ರೆಸ್ಕ್ಯೂ ಸೆಂಟರ್‌ನ ಸುಧೀಂದ್ರ ಐತಾಳರ ಪುತ್ರ ಬಾಲಕ ಧೀರಜ್3-4 ವರ್ಷವಿದ್ದಾಗಲೆ ವಿಷರಹಿತ ಹಾವು ಗಳೊಂದಿಗೆ ಆಟವಾಡುತ್ತಾ ಬೆಳೆದವ. ಇವನ ಉರಗ ರಕ್ಷಣೆ ಕ್ಷೇತ್ರದ ಸಾಧನೆಗೆ ರಾಜ್ಯ ಸರಕಾರ ಶೌರ್ಯ ಪ್ರಶಸ್ತಿ ನೀಡಿ ಇತ್ತೀಚೆಗೆ ಅಭಿನಂದಿಸಿದೆ.
ಸುಧೀಂದ್ರ ಐತಾಳರೂ ಪ್ರಾಣಿ ಹಾಗೂ ಹಾವುಗಳ ರಕ್ಷಣೆಗೆ ಖ್ಯಾತರು. ಗಾಯಗೊಂಡ ಪ್ರಾಣಿ, ಪಕ್ಷಿ, ಹಾವುಗ ಳಿಗೆ ಐತಾಳರು ಮನೆಯಲ್ಲೇ ಚಿಕಿತ್ಸೆ ನೀಡಿ ಗುಣ ಪಡಿಸುತ್ತಿದ್ದರು. ಧೀರಜ್ ನ ಮುಂದೆ ವಿಷ ರಹಿತ ಹಾವುಗಳನ್ನು ಬಿಟ್ಟು ಖುಷಿ ಪಡಿಸುತ್ತಿದ್ದರು.
ಧೀರಜ್ 9 ವರ್ಷದವನಿದ್ದಾಗ ನೆರೆ ನೀರಿನಲ್ಲಿ ಬಂದ ಹೆಬ್ಬಾವೊಂದರ ರಕ್ಷಣೆಗೆ ತಂದೆಯೊಂದಿಗೆ ತೆರಳಿದ್ದ. ಆಗ ಆತನ ಕೈಯಿಂದಲೇ ಹಾವನ್ನು ರಕ್ಷಿಸಿ ಮುನ್ನುಡಿ ಬರೆಯಲಾಗಿತ್ತು. ಸ್ಥಳೀಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿರುವ ಧೀರಜ್ ಐದು ವರ್ಷಗಳಲ್ಲಿ 80ಕ್ಕೂ ಮಿಕ್ಕಿ ವಿಷ ರಹಿತ ಹಾವುಗಳನ್ನು ಹಾಗೂ ನೂರಾರು ಪ್ರಾಣಿಗಳನ್ನು ರಕ್ಷಿಸಿದ್ದಾನೆ.
ಹೆಬ್ಬಾವು ಸೆರೆ ಹಿಡಿದ
ಕಳೆದ ನವೆಂಬರ್‌ನಲ್ಲಿ ಸಾಲಿಗ್ರಾಮದ ದೇವಸ್ಥಾನ ಬೆಟ್ಟಿನಲ್ಲಿ 16 ಅಡಿ ಉದ್ದದ ಹೆಬ್ಬಾವು ಕಂಡುಬಂದಿತ್ತು. ತಂದೆಯೊಂದಿಗೆ ಸ್ಥಳಕ್ಕೆ ಬಂದ ಧೀರಜ್ ಒಬ್ಬನೇ ಹಾವನ್ನು ಹಿಡಿದು ಚೀಲಕ್ಕೆ ತುಂಬಿದ್ದ.ಇದನ್ನು ಸ್ಥಳೀಯರೋರ್ವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ತಾಣಗಳಿಗೆ ಹರಿಬಿಟ್ಟಿದ್ದರು. ಇವನ ಸಾಧನೆಕಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.
ತಂದೆಯಿಂದ ಪ್ರಾಣಿ-ಪ್ರೀತಿ, ಉರಗ ಪ್ರೀತಿ ಬಳವಳಿಯಾಗಿ ಬಂದಿದೆ. ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ಕಲಿತು ಪ್ರಾಣಿ ರಕ್ಷಣೆ, ಉರಗ ಸೇವೆ ಮುಂದುವರಿಸುವುದು ನನ್ನ ಆಸೆ.
– ಧೀರಜ್ ಐತಾಳ