ವಿಜಯಪುರ: ರಾಜ್ಯದ ಬೊಕ್ಕಸಕ್ಕೆ ಅನಗತ್ಯವಾಗಿ ಹೊರ ಆಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ತನಗಿರುವ ವಿಶೇಷ ಅಧಿಕಾರ ಬಳಸಿಕೊಳ್ಳುವಂತೆ ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಶಾಸಕ ಯತ್ನಾಳ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಬಗ್ಗೆ ರಾಜ್ಯ ಸರ್ಕಾರದ ವಿತ್ತ ಇಲಾಖೆ ಎಚ್ಚರಿಸಿದೆ. ಆದರೂ ಇಂಥ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿರುವ ಸರ್ಕಾರದ ಕ್ರಮದಿಂದ ರಾಜ್ಯ ದಿವಾಳಿ ಆಗಲಿದೆ ವಿವರಿಸಿದರು.
ಕಾರಣ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಕೂಡಲೇ Fiscal Responsibility and Budget Management Act ಕಾಯ್ದೆಯಡಿ ರಾಜ್ಯ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಯತ್ನಾಳ್ , ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲೂ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ಬಿ.ಪಿ.ಎಲ್ ಕಾರ್ಡ್ ಕರ್ನಾಟಕ ರಾಜ್ಯದಲ್ಲಿವೆ. ಆದರೆ ಇದರಲ್ಲಿ ಅಸಲಿ-ನಕಲಿ ಎಷ್ಟು ಎಂದು ಈ ವರೆಗೂ ಆಡಿಟ್ ಆಗಿಲ್ಲ. ಬಡತನ ರೇಖೆಗಿಂತ ಮೇಲೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದೇ ಎಲ್ಲರಿಗೂ ಉಚಿತ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ನೀಡಿರುವ ವರದಿಯನ್ನು ತೋರಿಸಿ ವಿವರಿಸಿದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದರು.
ತಾವು ನೀಡಿದ ಮನವಿಯನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ್ದಾಗಿ ತಿಳಿಸಿರುವ ಶಾಸಕ ಯತ್ನಾಳ್ , ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.