ಬೆಳಗಾವಿ: ಸೈದ್ಧಾಂತಿಕ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ ಎಂಬುದು ಇಬ್ಬರ ನಾಯಕರ ಭೇಟಿಯ ದೃಶ್ಯದಿಂದ ಸಾಬೀತಾಗಿದೆ. ವಕ್ಫ್ ವಿಚಾರ ಸೇರಿದಂತೆ ಸೈದ್ಧಾಂತಿಕ ವಿಚಾರವಾಗಿ ವಿರೋಧಿಗಳನ್ನು ಟೀಕೆ ಮಾಡಿಕೊಂಡು ಬಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಜಮೀರ್ ಅಹಮ್ಮದ್ ಖಾನ್ ಭೇಟಿ ಮಾಡಿದ್ದಾರೆ.
ಮಂಗಳವಾರ (ಡಿ.17) ಸುವರ್ಣಸೌಧದಲ್ಲಿನ ಜಮೀರ್ ಅಹಮ್ಮದ್ ಖಾನ್ ಕಚೇರಿಗೆ ತೆರಳಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಿದ್ದಾರೆ. ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಯತ್ನಾಳ್, ಸಚಿವ ಜಮೀರ್ ಅವರನ್ನು ಭೇಟಿಯಾದ್ದು ಕೇವಲ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹೊರತು ಯಾವುದೇ ವಿಚಾರದ ಚರ್ಚೆಗಲ್ಲ. ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರ ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಂದಾಣಿಕೆ ರಾಜಕೀಯ ವಿರುದ್ಧ ಯತ್ನಾಳ್ ಧ್ವನಿ ಎತ್ತುತ್ತಲೇ ಇದ್ದಾರೆ. ಹಾಗೇ ಯಾವ ಸಚಿವರ ಕಚೇರಿಗೂ ಹೋಗಿ ಯಾವುದೇ ಒಂದು ಪತ್ರ ಕೊಟ್ಟಿಲ್ಲ ಎಂದು ಸ್ವಪಕ್ಷ ನಾಯಕರ ಹೊಂದಾಣಿಕೆ ರಾಜಕಾರಣದ ವಿರುದ್ಧ ಮಾತನಾಡಿದ್ದರು. ಇದೀಗ ಸಚಿವರ ಭೇಟಿಯಾಗಿದ್ದಕ್ಕೆ ಕಾರ್ಯಕರ್ತರಿಗೆ ಬೇರೆ ಸಂದೇಶ ಹೋಗುತ್ತೆ ಎಂದು ಶಾಸಕ ಯತ್ನಾಳ್ ಈ ಭೇಟಿ ಹಿಂದಿನ ಉದ್ದೇಶವನ್ನೂ ಬಹಿರಂಗಪಡಿಸಿದ್ದಾರೆ.
ಜಮೀರ್ ಭೇಟಿ ಬಳಿಕ ಯತ್ನಾಳ್ ಸ್ಪಷ್ಟನೆ ಏನು?
ಸಚಿವ ಜಮೀರ್ ಭೇಟಿಯಾಗಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಶಾಸಕ ಯತ್ನಾಳ್ “ಜಮೀರ್ ಅವರ ಸರಕಾರಿ ಕಚೇರಿಗೆ ಹೋಗಿದ್ದೆ, ನಾನು ಏನು ಮನೆಗೆ ಹೋಗಿಲ್ಲ, ಅಲ್ಲಿ ಹೋಗಿ ಏನು ಬಿರಿಯಾನಿ ತಿಂದಿಲ್ಲ” ಎಂದು ಉತ್ತರಿಸಿದರು.
ಅಲ್ಪಸಂಖ್ಯಾಕ ಇಲಾಖೆಯಲ್ಲಿ ಬರುವ ಯೋಜನೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ. 80 ರಷ್ಟು ಉಳಿದರಲ್ಲಿ ಕ್ರೈಸ್ತರಿಗೆ ಶೇ.10, ಜೈನರು, ಬೌದ್ಧರು, ಸಿಖ್, ಪಾರ್ಸಿಗಳು ಸೇರಿ ಕೇವಲ ಶೇ. 10 ರಷ್ಟು ಮೀಸಲಾತಿ ನಿಗದಿಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿರುವುದು ವಿರೋಧಿಸಿ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆಯಲಾಗಿತ್ತು. ಅದಕ್ಕಾಗಿ ವಸತಿ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹ್ಮದ್ ಖಾನ್ ರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಕರೆಸಿ, ಜಿಲ್ಲಾವಾರು, ಮತಕ್ಷೇತ್ರವಾರು ಜನಸಂಖ್ಯೆ ಅನುಗುಣವಾಗಿ ಧರ್ಮವಾರು, ಮೀಸಲುವಾರು ಫಲಾನುಭವಿಗಳ ಆಯ್ಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕ್ಷೇತ್ರಕ್ಕೆ ಹೆಚ್ಚುವರಿ 1,200 ಆಶ್ರಯ ಮನೆಗಳು ಮಂಜೂರು ಹಾಗೂ ನನೆಗುದಿಗೆ ಬಿದ್ದಿರುವ ಸ್ಲಂ ಮನೆಗಳು ಪೂರ್ಣಗೊಳಿಸುವ ಭರವಸೆ ನೀಡಿದ ಸಂದರ್ಭ. ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಕ್ಕೆ ವದಂತಿಗಳ ಸೃಷ್ಟಿಸುತ್ತಿರುವವರು ನಾನು ಜೈನ್, ಸಿಖ್, ಪಾರ್ಸಿ, ಬೌದ್ಧ ಸಮಾಜದ ಫಲಾನುಭವಿಗಳ ಪರ ಮಾತನಾಡಿದ್ದೇನೆ ಹಾಗೂ ಆ ಸಮಾಜದ ಬಡವರ ಪರ ಧ್ವನಿ ಎತ್ತಿದ್ದೇನೆ ಎಂಬುದು ಮನದಟ್ಟು ಮಾಡಿಕೊಳ್ಳಬೇಕು ಎಂದು ಎಕ್ಸ್ ಖಾತೆಯಲ್ಲಿ ಸಮಜಾಯಿಷಿ ನೀಡಿದ್ದಾರೆ.