Advertisement

ಆನ್‌ಲೈನ್‌ ಬೇಡ, ಆಫ್ ಲೈನ್‌ ಪರೀಕ್ಷೆಯೇ ಇರಲಿ

02:30 AM May 31, 2021 | Team Udayavani |

ಪರೀಕ್ಷೆ ವಿಷಯದಲ್ಲಿ ಮಕ್ಕಳ ಭವಿಷ್ಯದ ಜತೆ ಆಟವೂ ಸಲ್ಲದು, ಹಾಗೆಯೇ ಆರೋಗ್ಯದ ಬಗ್ಗೆ ರಿಸ್ಕ್ ತೆಗೆದುಕೊಳ್ಳಲೂ ಆಗದು. ಇದು ಉದಯವಾಣಿ ನಡೆಸಿದ ಮೆಗಾ ಸರ್ವೇಯಲ್ಲಿ ಜನತೆ ಹೇಳಿದ ಅಭಿಪ್ರಾಯ ಪರೀಕ್ಷೆ ಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳಲಿ ಎನ್ನುತ್ತಾರೆ ಜನರು. ಪರೀ ಕ್ಷೆಯ ಜತೆ ಜತೆಗೆ ಆನ್‌ ಲೈನ್‌ ಪಾಠ, ಆನ್‌ ಲೈನ್‌ ಪರೀಕ್ಷೆ, ಪಾಠ ಅರ್ಥ ವಾಗಿದ್ದು, ಸಿಲೆಬಸ್‌ ಮುಗಿಸಿದ್ದು ಎಲ್ಲ ವಿಷಯಗಳ ಬಗ್ಗೆಯೂ ಮಕ್ಕಳು, ಹೆತ್ತವರು ಮತ್ತು ಶಿಕ್ಷಕರು ತಮ್ಮದೇ ಆದ ಅಭಿಪ್ರಾಯ ಹೇಳಿದ್ದಾರೆ.

Advertisement

ಪಾಠ ಪರಿಣಾಮಕಾರಿ, ಭೌತಿಕವಾಗಿಯಷ್ಟು ಅಲ್ಲ
ಇದು ಸಮೀಕ್ಷೆಯಲ್ಲಿ ಶಿಕ್ಷಕರು ಹೇಳಿದ ಸತ್ಯ. ಈ ವರ್ಷದ ಶೈಕ್ಷಣಿಕ ಪಾಠಗಳು ಪರಿಣಾಮಕಾರಿಯಾಗಿತ್ತೇ ಎಂದು ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಮಿತಿಯೊಳಗೆ ಪರಿಣಾಮಕಾರಿಯಾಗಿಸಿದ ತೃಪ್ತಿ ಇದೆ ಎಂದು ಶೇ.43.2ರಷ್ಟು ಮಂದಿ ಹೇಳಿದ್ದಾರೆ. ಆದರೆ, ಭೌತಿಕ ತರಗತಿಯಷ್ಟು ಪರಿಣಾಮಕಾರಿಯಾಗಿ ಇರಲಿಲ್ಲ ಎಂದು ಶೇ.32.7ರಷ್ಟು ಶಿಕ್ಷಕರು ಹೇಳಿದ್ದು, ಈ ಮೂಲಕ ಆನ್‌ ಲೈನ್‌ ಪಾಠ ಮಕ್ಕಳಿಗೆ ಗ್ರಹಿಕೆಯಾಗಿಲ್ಲ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಶೇ.24ರಷ್ಟು ಮಂದಿ ಸಿಲೆಬಸ್‌ ಕವರ್‌ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಪರೀಕ್ಷೆ ಬಗ್ಗೆ ಶಿಕ್ಷಕರದ್ದು ಬಿಲ್‌ಕುಲ್‌ ಮಾತು. ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಜೀವನದಲ್ಲಿ ಬರುವ ದೊಡ್ಡ ಪರೀಕ್ಷೆಗಳನ್ನು ಎದುರಿಸುವುದಾದರೆ, ಈಗಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಬರೆಯಲೇಬೇಕು ಅಂತ ಶಿಕ್ಷಕರೊ ಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಎಂಥ ಕಷ್ಟಕಾಲದಲ್ಲೂ ನಾವು ಪರೀಕ್ಷೆ ನಡೆಸಲು ಸಿದ್ಧರಿದ್ದೇವೆ ಎಂದು ಶಿಕ್ಷಕರು ಧೈರ್ಯದಿಂದಲೇ ಹೇಳಿದ್ದಾರೆ. ಅಂದರೆ, ಶೇ.74.4ರಷ್ಟು ಶಿಕ್ಷಕರು ಪರೀಕ್ಷೆ ನಡೆಸಲು ಸಿದ್ಧ ಎಂದಿದ್ದರೆ, ಶೇ.25.6ರಷ್ಟು ಮಂದಿ ಮಾತ್ರ ಇಲ್ಲವೆಂಬ ಉತ್ತರ ಕೊಟ್ಟಿದ್ದಾರೆ.

ಪಬ್ಲಿಕ್‌ ಪರೀಕ್ಷೆ ಬಗ್ಗೆ ಇವರದ್ದು ಸಹಮತವಿದೆ. ಅಂದರೆ, ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸಿ ಅಂತ ಶೇ.46.8ರಷ್ಟು ಮಂದಿ ಹೇಳಿದ್ದರೆ, ಶಾಲಾ-ಕಾಲೇಜು ಮಟ್ಟದಲ್ಲಿ ಸಾಕು ಅಂತ ಶೇ.40.1ರಷ್ಟು ಶಿಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾ ಮಟ್ಟದ ಪರೀಕ್ಷೆ ಸಾಕು ಅಂತ ಶೇ.13.1ರಷ್ಟು ಮಂದಿ ಮಾತ್ರ ಹೇಳಿದ್ದಾರೆ.

Advertisement

ಸಮೀಕ್ಷೆ ವೇಳೆ ಬಹಳಷ್ಟು ಶಿಕ್ಷಕರು ಆನ್‌ ಲೈನ್‌ ಪಾಠ, ವಿದ್ಯಾರ್ಥಿಗಳ ಭವಿಷ್ಯ, ಪರೀಕ್ಷೆಗಳ ಬಗ್ಗೆ ಕಳವಳ, ಆಸ್ಥೆ ಬಗ್ಗೆ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಜೀವನ ಮತ್ತು ಪರೀಕ್ಷೆಗಳು ಎಷ್ಟು ಮುಖ್ಯ ಎಂಬ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಪರೀಕ್ಷೆ ಮುಖ್ಯ, ಆದರೆ, ಈ ಕೊರೊನಾ ಸ್ಥಿತಿಯಿಂದ ಅವರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಆತಂಕವೂ ಅವರ‌ಲ್ಲಿದೆ.

ಆನ್‌ ಲೈನ್‌ ಪಾಠವೇ ಕಷ್ಟ!
ಹೆತ್ತವರು ಮತ್ತು ಶಿಕ್ಷಕರಿಗಿಂತ ಪರೀಕ್ಷೆ ಬಗ್ಗೆ ಕೊಂಚ ಅಸಮಾಧಾನ ಇರಿಸಿಕೊಂಡಿರುವವರು ಮಕ್ಕಳು. ಇದಕ್ಕೆ ಕಾರಣ, ಅರ್ಥವಾಗದ ಆನ್‌ ಲೈನ್‌ ಪಾಠ. ಈ ಬಗ್ಗೆ ಸಮೀಕ್ಷೆಯಲ್ಲಿ ಬಹಿರಂಗವಾಗಿಯೇ ಮಕ್ಕಳು ತಮ್ಮ ಅತೃಪ್ತಿ ತೋಡಿಕೊಂಡಿದ್ದಾರೆ. ಪರೀಕ್ಷೆ ನಡೆಸಿದರೆ ಬರೆಯುತ್ತೇವೆ ಎಂದು ಬಹುತೇಕ ವಿದ್ಯಾರ್ಥಿಗಳು ಹೇಳಿದ್ದಾರೆ. ಪರೀಕ್ಷೆ ಎಂಬುದು ತಮ್ಮ ಜೀವನದ ಪ್ರಮುಖ ಘಟ್ಟ ಎಂಬುದು ಅವರಿಗೂ ಅರಿವಿದೆ. ಆದರೆ, ಪಾಠವೇ ಅರ್ಥವಾಗದಿದ್ದ ಮೇಲೆ ಪರೀಕ್ಷೆ ಬರೆಯುವುದು ಕಷ್ಟವಲ್ಲವೇ ಎಂಬ ಪ್ರಶ್ನೆಯನ್ನೂ ಮಕ್ಕಳು ಎತ್ತಿದ್ದಾರೆ.

ಈವರೆಗೆ ನಡೆಸಿ ಆನ್‌ ಲೈನ್‌ ಪಾಠ ಎಷ್ಟು ಪರಿಣಾಮಕಾರಿಯಾಗಿತ್ತು ಎಂದು ನಾವು ಕೇಳಿದ ಪ್ರಶ್ನೆಗೆ, ಶೇ. 78.67ರಷ್ಟು ಮಕ್ಕಳು ಅರ್ಥ ಮಾಡಿಕೊಳ್ಳಲು ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಹಾಗೆಯೇ ಏನೂ ಸಮಸ್ಯೆಯಾಗಿಲ್ಲ ಎಂದು ಶೇ.16.69ರಷ್ಟು ಮಕ್ಕಳು ಹೇಳಿದ್ದಾರೆ. ಈ ಮೂಲಕ ಆನ್‌ ಲೈನ್‌ ಪಾಠದ ಕಷ್ಟ ಹೊರಹಾಕಿವೆ.

ಇನ್ನು ಪರೀಕ್ಷೆ ನಡೆಸಿದರೆ ಎದುರಿಸಲು ಸಿದ್ಧರಿದ್ದೇವೆ ಎಂದು ಎಸೆಸೆಲ್ಸಿ ವಿದ್ಯಾರ್ಥಿಗಳಿಗಿಂತ ಪಿಯುಸಿ ಮಕ್ಕಳೇ ಹೆಚ್ಚು ಮುಂದಿದ್ದಾರೆ. ಅಂದರೆ, ಎಸ್ಸೆಸ್ಸೆಲ್ಸಿಯಲ್ಲಿ ಶೇ.49ರಷ್ಟು ಮಕ್ಕಳು ಪರೀಕ್ಷೆ ಬರೆಯಲು ಸಿದ್ಧ ಎಂದಿದ್ದರೆ, ಪಿಯು  ಯಲ್ಲಿ ಶೇ.49.76ರಷ್ಟು ಮಕ್ಕಳು ಪರೀಕ್ಷೆ ನಡೆಯಲಿ ಎಂದಿದ್ದಾರೆ. ಆದರೆ ಈ ವರ್ಷ ಬೇಡ ಅಂತ ಶೇ.32ರಷ್ಟು ಎಸೆಸೆಲ್ಸಿ ಮಕ್ಕಳು ಹೇಳಿದ್ದರೆ, ಪಿಯುಸಿಯಲ್ಲಿ ಶೇ.21.81ರಷ್ಟು ಮಕ್ಕಳು ಬೇಡ ಎಂದಿದ್ದಾರೆ.

ಇನ್ನು ಪರೀಕ್ಷೆ ನಡೆಯುವುದಾದರೆ ಯಾವ ವಿಧಾನ ಉತ್ತಮ ಎಂದು ಕೇಳಿರುವ ಪ್ರಶ್ನೆಗೆ ಆಫ್ ಲೈನ್‌ ಅಂತ ಶೇ.39.4, ತರಗತಿ ಪರೀಕ್ಷೆಗಳ ಅಂಕ ಪರಿಗಣಿಸಲಿ ಅಂತ ಶೇ.34.2, ಆನ್‌ ಲೈನ್‌ ಪರೀಕ್ಷೆಯಾಗಲಿ ಅಂತ ಶೇ.26.4ರಷ್ಟು ಮಂದಿ ಹೇಳಿದ್ದಾರೆ.

ಪ್ರಮುಖ ವಿಷಯಗಳು ಸಾಕು: ಆನ್‌ ಲೈನ್‌ ನಲ್ಲಿ ಪಾಠ ಅರ್ಥವಾಗಿಲ್ಲ ಎಂದು ಹೇಳಿ ಕಷ್ಟ ತೋಡಿಕೊಂಡಿರುವ ಮಕ್ಕಳು, ಪ್ರಮುಖ ವಿಷಯಗಳ ಪರೀಕ್ಷೆ ಸಾಕು ಎಂದೇ ಹೇಳಿದ್ದಾರೆ. ಅಂದರೆ ಶೇ.46.9ರಷ್ಟು ಮಕ್ಕಳು ಈ ಅಭಿಪ್ರಾಯ ವ್ಯಕ್ತಪಡಿಸಿವೆ. ಪಠ್ಯ ಕ್ರಮದ ಮೇಲಿನ ಶೇ.50ರಷ್ಟು ವಿಷ ಯದ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ.33.8 ಮತ್ತು ಎಲ್ಲ ವಿಷಯಗಳ ಮೇಲೆ ನಡೆಯಲಿ ಎಂದು ಶೇ.19.3ರಷ್ಟು ಮಕ್ಕಳು ಅಭಿಪ್ರಾಯ ಪಟ್ಟಿದ್ದಾರೆ.

ಉಳಿದಂತೆ ನಾವು ನಿಮ್ಮ ಅಭಿಪ್ರಾಯ ಹೇಳಿ ಎಂದು ಕೇಳಿರುವ ಪ್ರಶ್ನೆಗೆ ಬಹುತೇಕ ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎಂದಿದ್ದರೆ, ಪಿಯುಸಿ ಮಕ್ಕಳು ಪರೀಕ್ಷೆ ಇರಲಿ ಎಂದೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next