ಮುಂಬಯಿ: ನಮ್ಮ ಬದುಕಿಗೆ ಒಂದು ಸಂವಿಧಾನವಿದೆ. ಆ ಸಂವಿಧಾನವನ್ನೇ ನಾವು ಧರ್ಮ ಎನ್ನುತ್ತೇವೆ. ಸುಸಂಸ್ಕೃತ ಜೀವನ ಪದ್ಧತಿಯೆ ನಮ್ಮ ಧರ್ಮವಾಗಬೇಕು. ಸರ್ವೇ ಜನಃ ಸುಖೀನೋ ಭವಂತು ಎಂಬುವುದು ನಮ್ಮ ಧ್ಯೇಯ ವಾಕ್ಯವಾಗಿರಬೇಕು. ಇದು ಧರ್ಮದ ಉದ್ದೇಶವೂ ಹೌದು. ಧರ್ಮಯುಕ್ತವಾದ ಗಳಿಕೆ, ಉಳಿಕೆ, ಬಳಕೆ ಇದ್ದರೆ ಅದಕ್ಕೆ ಅಪಾಯವಿಲ್ಲ. ಜೀವನದಲ್ಲಿ ಅಡ್ಡದಾರಿಯಲ್ಲಿ ಸಾಗುವುದೇ ಅಧರ್ಮವಾಗಿದೆ. ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿಗಳ ಪ್ರಯತ್ನವನ್ನು ನಾವೆಲ್ಲವೂ ಬೆಂಬಲಿಸೋಣ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ನುಡಿದರು.
ಆ. 8ರಂದು ಸಯಾನ್‌ನ ಸ್ವಾಮಿ ನಿತ್ಯಾನಂದ ಸಭಾ ಗೃಹದಲ್ಲಿ ಜರಗಿದ ಒಡಿಯೂರು ಶ್ರೀಗಳ ವರ್ಧಂತಿ ಉತ್ಸವ, ಗುರು ವಂದನೆ ಹಾಗೂ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸ್ವಾರ್ಥ ಬದುಕನ್ನು ಬಿಟ್ಟು ನಿಸ್ವಾರ್ಥ ಬದುಕು ನಮ್ಮದಾಗಬೇಕು. ಆಗ ಮಾತ್ರ ಭಗವಂತನ ಕೃಪೆ ಸದಾ ನಮಗಿರುತ್ತದೆ. ಪ್ರೀತಿಯಿಂದ ನಾವು ಸಮಾಜಕ್ಕೆ ನೀಡಿದರೆ ಅದರ ಪ್ರತಿಫಲವು ತಿರುಗಿ ನಮಗೆ ಸಿಗುತ್ತದೆ. ಗುರುವಿನ ಆಶೀರ್ವಾದವಿದ್ದರೆ ಎಲ್ಲ ಕಾರ್ಯವೂ ಯಶಸ್ವಿಯಾಗುತ್ತದೆ. ಗುರುಭಕ್ತಿ ಎಂದರೆ ಮುಂಬಯಿಯ ಗುರುಭಕ್ತರನ್ನು ನೋಡಬೇಕು. ಇಲ್ಲಿಯ ಗುರುಭಕ್ತರು ಸಮಾಜಕ್ಕಾಗಿ ಮಾಡುವ ಸೇವೆಯೇ ಗುರುವಿನ ಸೇವೆಯಾಗಿದೆ ಎಂದು ನುಡಿದರು.
ಪ್ರಾರಂಭದಲ್ಲಿ ಕಾರ್ಯಕ್ರಮದ ವ್ಯವಸ್ಥಾಪಕ ಉದ್ಯಮಿ, ನಿತ್ಯಾನಂದ ಕ್ಯಾಟರರ್ನ ಮಾಲಕ ವಿಶ್ವನಾಥ್ ವಿ. ಶೆಟ್ಟಿ ದಂಪತಿ ಶ್ರೀಗಳ ಪಾದಪೂಜೆಗೈದು ಸ್ವಾಗತಿಸಿದರು. ಆನಂತರ ಕಾರ್ಯಕ್ರಮದ ವ್ಯವಸ್ಥಾಪಕರುಗಳಾದ ಸ್ವಾಮಿ ನಿತ್ಯಾನಂದ ಹಾಲ್‌ನ ಮಾಲಕ ಬಾಬು ಎನ್. ಶೆಟ್ಟಿ, ಸರೋಜಿನಿ ಹಿರಿಯಣ್ಣ ಶೆಟ್ಟಿ, ನಿತ್ಯಾನಂದ ಕ್ಯಾಟರರ್ನ ವಿಶ್ವನಾಥ್ ವಿ. ಶೆಟ್ಟಿ ಅವರು ಗುರುಗಳಿಗೆ ಹಾರಾರ್ಪಣೆಗೈದು ಫಲಪುಷ್ಪವನ್ನಿತ್ತು ವಂದಿಸಿದರು.
ಅನಂತರ ನಡೆದ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮವನ್ನು ಶ್ರೀ ಗುರುದೇವಾನಂದ ಸ್ವಾಮೀಗಳು ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಧ್ವಿ ಮಾತಾನಂದಮಯಿ, ಬಾಬು ಎನ್. ಶೆಟ್ಟಿ. ಸರೋಜಿನಿ ಹಿರಿಯಣ್ಣ ಶೆಟ್ಟಿ, ವಿಶ್ವನಾಥ ವಿ. ಶೆಟ್ಟಿ, ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಗುರುದೇವಾ ಸೇವಾ ಬಳಗದ ಪದಾಧಿಕಾರಿಗಳು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಾಧ್ವಿ ಮಾತಾನಂದಮಯಿ ಅವರು ಪ್ರಾರ್ಥನೆ ಗೈದರು. ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಸಮಾಜಪರ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಗುರುದೇವ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ವತಿಯಿಂದ ಗುರುಗಳಿಗೆ ಹಾಗೂ ಸಾಧ್ವಿ ಮಾತಾನಂದಮಯಿ ಅವರಿಗೆ ಫಲಪುಷ್ಪವನ್ನು ಅರ್ಪಿಸಲಾಯಿತು. ಊರಿನಲ್ಲಿ ನಿರ್ಮಾಣಗೊಳ್ಳಲಿರುವ ಜ್ಞಾನಮಂದಿರಕ್ಕೆ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ವತಿಯಿಂದ ಕಾಣಿಕೆ ರೂಪದಲ್ಲಿ ದೇಣಿಗೆಯನ್ನು ಅರ್ಪಿಸಲಾಯಿತು.
ಶಿಬರೂರು ಸುರೇಶ್ ಶೆಟ್ಟಿ ಬಳಗದವರಿಂದ ಭಕ್ತಿಗಾನ ವೈಭವ ಜರಗಿತು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.