Advertisement

ಈಗ ಚುರುಕಾಯ್ತು ಪ್ರಚಾರ, ಭಾಷಣ

12:38 PM Apr 10, 2018 | Team Udayavani |

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಪಕ್ಷಗಳು ಹುರಿಯಾಳುಗಳನ್ನು ಅಂತಿಮಗೊಳಿಸುತ್ತಿರುವ ಬೆನ್ನಲ್ಲೇ ಕ್ಷೇತ್ರದ ಪ್ರಚಾರದಲ್ಲಿ ಚುರುಕು ಕಾಣಿಸಿಕೊಂಡಿದೆ. ಬಿಜೆಪಿ ಹಲವು ತಿಂಗಳಿನಿಂದ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿತ್ತು, ಇತ್ತ ಕಾಂಗ್ರೆಸ್‌ನವರು ವಿವಿಧ ಕಾಮಗಾರಿ ಉದ್ಘಾಟನೆ, ಯೋಜನೆ ಘೋಷಣೆ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಜೆಡಿಎಸ್‌ ಸಹ ತನ್ನದೇ ಆದ ರೀತಿಯಲ್ಲಿ ಪ್ರಚಾರ ನಡೆಸಿತ್ತು.

Advertisement

ಇದೀಗ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ದಾವಣಗೆರೆ ಉತ್ತರಕ್ಕೆ ಮಾಜಿ ಸಚಿವ ಎಸ್‌ .ಎ. ರವೀಂದ್ರನಾಥ್‌ರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಇದೇ ಕಾರಣಕ್ಕೇನೋ ಸೋಮವಾರ ಇಡೀ ದಿನ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಲ್ಲಾ ನಾಯಕರು ಸುತ್ತಾಡಿದರು. 

ವಿಶೇಷವಾಗಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷ ಎಚ್‌.ಸಿ. ಜಯಮ್ಮ, ಮುಖಂಡರಾದ ಚೇತುಬಾಯಿ, ಸಲೀನಾ, ಶಾಂತಮ್ಮ, ಭಾಗ್ಯ ಪಿಸಾಳೆ ನೇತೃತ್ವದ ತಂಡ ಮಹಾನಗರ ಪಾಲಿಕೆ ವ್ಯಾಪ್ತಿಯ 20, 21, 22ನೇ ವಾರ್ಡ್‌ನ ಮನೆ ಮನೆಗೆ ತೆರಳಿ, ಮಹಿಳೆಯರು ಈ ಬಾರಿ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. 

ಬಿಜೆಪಿಯ ಮೊದಲ ಪಟ್ಟಿಯಲ್ಲೇ ಟಿಕೆಟ್‌ ಘೋಷಣೆಯಾಗಿರುವ ಏಕೈಕ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಸಹ ಮುಷ್ಟಿ ಅಕ್ಕಿ ಅಭಿಯಾನದಲ್ಲಿ ಭಾಗಿಯಾದರು. ಇವರಿಗೆ ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ ಸಾಥ್‌ ನೀಡಿದರು. ಇವರಿಗೆ ಜೊತೆಯಾಗಿ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌ ಸೇರಿದಂತೆ ವಿವಿಧ ನಾಯಕರು ಸಾಗಿದರು.

ಇತ್ತ ಕಾಂಗ್ರೆಸ್‌ ಸಹ ಭರ್ಜರಿ ತಾಲೀಮು ಆರಂಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಭಾಗದಲ್ಲಿನ ಜನರ ಸಮಸ್ಯೆ ನಿವಾರಣೆಗೆ ಸರ್ಕಾರ ತಂದ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. 

Advertisement

ಯಾವುದೋ ಕಾರಣಕ್ಕೆ ಮುನಿಸಿಕೊಂಡ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿ, ಸಮಾಧಾನ ಪಡೆಸುವಲ್ಲಿ ಪಕ್ಷದ ನಾಯಕರು ಯಶಸ್ವಿಯಾದರು. ಇತ್ತ ಜೆಡಿಎಸ್‌ ನಾಯಕರು ಮಾಯಕೊಂಡ, ಹರಿಹರ ಕ್ಷೇತ್ರಗಳಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸಿದರು. ಗುತ್ತೂರಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಕೊಂಡಜ್ಜಿ, ಮಾಯಕೊಂಡ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಿತು. 

ಹೊನ್ನಾಳಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಾಸ್ವೆಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ, ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನ ನಡೆಸಿದರು. 

ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಮಂಗಳವಾರ ತಮ್ಮ ಜನ್ಮದಿನ ಆಚರಿಸಿಕೊಳ್ಳುವ ನಿಮಿತ್ತ ಹರಪನಹಳ್ಳಿ ಪಟ್ಟಣದ ದಲಿತ ಕೇರಿ, ವಾಲ್ಮೀಕಿ ಕೇರಿ, ಮುಸ್ಲಿಂ ಕಾಲೋನಿಗಳಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸುವ ಜೊತೆಗೆ ಪ್ರಚಾರ ಕಾರ್ಯ ನಡೆಸಿದರು. ಇತ್ತ ಶಾಸಕ ಎಂ.ಪಿ. ರವೀಂದ್ರ, ಇನ್ನೋರ್ವ ಬಿಜೆಪಿ ಮುಖಂಡ ಬಾಗಳಿ ಕೊಟ್ರೇಶ್‌ ಬೆಂಗಳೂರಿನಲ್ಲೇ ಬೀಡುಬಿಟ್ಟಿರುವ ಕುರಿತು ಕೇಳಿಬಂದಿದೆ. ಶಾಸಕ ಎಚ್‌.ಪಿ. ರಾಜೇಶ್‌, ದೊಣ್ಣೆಹಳ್ಳಿ, ಹಿರೇಮಲ್ಲೂರು ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ಚನ್ನಗಿರಿಯಲ್ಲಿ ಶಾಸಕ ವಡ್ನಾಳ್‌ ರಾಜಣ್ಣ ಕಾರ್ಯಕರ್ತರ ಸಭೆ ನಡೆಸಿದರು. ಬಿಜೆಪಿ ಮುಖಂಡ ಮಾಡಾಳು ವಿರುಪಾಕ್ಷಪ್ಪ ಸಹ ಮುಷ್ಠಿ ಅಕ್ಕಿ ಅಭಿಯಾನದಲ್ಲಿ ಭಾಗಿಯಾದರು. ಇತ್ತ ಮಹಿಮಾ ಪಟೇಲ್‌ ತ್ಯಾವಣಿಗೆ ಭಾಗದಲ್ಲಿ ಮತ ಬೇಟೆ ನಡೆಸಿದರು. ಜೆಡಿಎಸ್‌ನ ಹೊದಿಗೆರೆ ರಮೇಶ್‌ ಸಹ ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸಿ, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸಿದರು.
 
ಅಭಿಯಾನ ಸಮಾರೋಪ ಮಂಗಳವಾರ ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರದ ಮುಷ್ಟಿ ಅಕ್ಕಿ ಅಭಿಯಾನದ ಸಮಾರೋಪ ನಡೆಯಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ, ಪಕ್ಷದ ಜಿಲ್ಲಾಧ್ಯಕ್ಷ, ಸಂಭವನೀಯ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next