ಮೈಸೂರು: ಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಪ್ರಜಾಧ್ವನಿ ಮಾಡುವುದಲ್ಲ ತಾಲೂಕುಗಳಲ್ಲಿ 500 ರೂ ಕೊಟ್ಟು ಜನರನ್ನ ತರುವುದಲ್ಲ, ಬದಲಾಗಿ ಹಳ್ಳಿಗಳಿಗೆ ಹೋಗಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಸವಾಲು ಹಾಕಿದ್ದಾರೆ.
ಗುರುವಾರ ಪತ್ರಕರ್ತ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಶೌಚಾಲಯ ವ್ಯವಸ್ಥೆ ಇಲ್ಲ.ನನ್ನ ಮನೆಗೆ ಬಂದು ಸಮಸ್ಯೆ ಹೇಳುವ ಜನರ ಕಷ್ಟ ಕೇಳಿ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ಇದನ್ನ ಯಾವುದೇ ಎಕಾನಾಮಿಸ್ಟ್ ಕೊಟ್ಟಿರುವುದಲ್ಲ ಎಂದರು.
ಹಲವಾರು ಭಾಗ್ಯಗಳನ್ನ ಕೊಟ್ಟು ಸಮಾಜವನ್ನ ಉದ್ದಾರ ಮಾಡಿದ್ದೇನೆ ಎನ್ನುತ್ತಾರೆ. ದಿನ ಬೆಳಗಾದರೆ ದಲಿತ ಸಮುದಾಯದ ಜನ ನನ್ನ ಮನೆಯ ಮುಂದೆ ಜನರು ಬಂದು ಸಮಸ್ಯೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಘೋಷಣೆ ಮಾಡಿರುವ ಉಚಿತ ವಿದ್ಯುತ್, 2000 ಹಣ ಕಾರ್ಯಕ್ರಮ ರೂಪಿಸಲು 48 ಸಾವಿರ ಕೋಟಿ ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಕೊಡುವುದಾಗಿ ಘೋಷಣೆ ಮಾಡಿದರು. ಕೇವಲ 5 ಕೆಜಿಗೆ ಆಗುವಷ್ಟು ಹಣ ಮಾತ್ರ ಕೊಟ್ಟರು, 2 ಕೆಜಿ ಹೊರೆ ನನ್ನ ಮೇಲೆ ಬಿತ್ತು. ಅವರೇನೋ ತಿಂತಾರೆ ಅಂತದ್ದನ್ನ ನಮ್ಮ ಜನಕ್ಕೆ ನೀವೇಕೆ ತಿನ್ನಿಸುತ್ತೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜೊತೆಗೆ ಸರಕಾರ ಮಾಡಿ ತಪ್ಪು ಮಾಡಿದೆ ಎನಿಸಿದರೂ, ರೈತರ ಸಾಲಮನ್ನಾ ಮಾಡಿದ ತೃಪ್ತಿ ಇದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸಿದರು, ಆದ್ರೆ ನನ್ನ ಇಮೇಜ್ ಎಲ್ಲೂ ಕಡಿಮೆ ಆಗಿಲ್ಲ.ಈ ಬಾರಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ, 120 ಸ್ಥಾನ ಬರುವ ವಿಶ್ವಾಸ ಇದೆ ಎಂದರು.
ಅಂದು ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಈ ಬಿಜೆಪಿ ಇರಲಿಲ್ಲ.ಈಗ ಬಿಜೆಪಿಗರು ಸಹ ಅಧಿಕಾರದ ರುಚಿ ನೋಡಿದ್ದಾರೆ.ಈಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಆಗಿದೆ. ಅಂದು ಸಮ್ಮಿಶ್ರ ಸರ್ಕಾರ ಮಾಡದೆ ಇದ್ದಿದ್ದರೆ ಕೋಲಾರದಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಟ್ರ್ಯಾಪ್ ಆಗಿದ್ದಂತು ಸತ್ಯ. ಕಾಂಗ್ರೆಸ್ಸಿಗೆ ನಮ್ಮಿಂದ ಹೆಲ್ಪ್ ಆಗಿದೆ, ಅವರಿಂದ ಜೆಡಿಎಸ್ ಪಕ್ಷಕ್ಕೆ ಹೆಲ್ಪ್ ಆಗಿಲ್ಲ ಎಂದರು.
ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನಿಡುತ್ತೇವೆ. ಕಾರ್ಯಕರ್ತರು ಗಟ್ಟಿ ಇರೋವಾಗ ಮೊದಲ ಆದ್ಯತೆ ಕಾರ್ಯಕರ್ತರಿಗೆ.ತಲೆ ಕೆಡಿಸಿಕೊಳ್ಳಬೇಡಿ ಈ ಬಾರಿ ಹಾಸನವನ್ನೂ ಗೆಲ್ಲುತ್ತೇವೆ ಎಂದು ಪರೋಕ್ಷವಾಗಿ ಭವಾನಿ ರೇವಣ್ಣಗೆ ಹಾಸನ ಕ್ಷೇತ್ರದ ಟಿಕೆಟ್ ಇಲ್ಲ ಎನ್ನುವ ಸೂಚನೆ ನೀಡಿದರು.
ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಉರಿಗೌಡ ,ನಂಜೇಗೌಡ ಈಗ ಸೃಷ್ಟಿಸಿಕೊಂಡಿರೋ ಪಾತ್ರಗಳು. ನಾನು ಅವರ ಬಗ್ಗೆ ಈ ವರೆಗೂ ಕೇಳಿರಲಿಲ್ಲ.ಇನ್ಮುಂದೆ ಅವ್ರ ಬಗ್ಗೆ ನಾನೂ ಕೂಡ ಅಧ್ಯಯನ ಮಾಡಬೇಕಿದೆ ಎಂದರು.
ಈ ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಈ ಬಾರಿಯ ಚುನಾವಣೆ 3 ಪಕ್ಷಗಳ ಭವಿಷ್ಯದ ಪ್ರಶ್ನೆ ಎಂದು ಇದೇ ವೇಳೆ ತಿಳಿಸಿದರು.