Advertisement

ಬರದಿಂದ ಬರಿದಾಗ್ತಿದೆ ಲಿಂಗನಮಕ್ಕಿ ಜಲಾಶಯ

12:25 AM Apr 25, 2017 | Karthik A |

ಶಿವಮೊಗ್ಗ: ತೀವ್ರ ಬರದಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನೇದಿನೇ ಕುಸಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಬಾರಿ ಕನಿಷ್ಠ ನೀರಿನ ಮಟ್ಟ ದಾಖಲೆಯಾಗುವ ಸಾಧ್ಯತೆ ಇದೆ. ರವಿವಾರ ಜಲಾಶಯದ ನೀರಿನ ಮಟ್ಟ 1,750 ಅಡಿಗೆ ತಲುಪಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1,768.45 ಅಡಿಯಷ್ಟು ನೀರಿತ್ತು. ಕಳೆದ ವರ್ಷ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಸುಮಾರು 6 ತಿಂಗಳ ಕಾಲ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹದಲ್ಲಿ ಉಳಿಕೆಯಾಗಿತ್ತು.

Advertisement

ಮಳೆಗಾಲ ಆರಂಭವಾಗುವಾಗ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ಒಟ್ಟಾರೆ ಮುಂಗಾರು ಮಳೆ ಕೊರತೆ ಕಾರಣದಿಂದ ಜಲಾಶಯದಲ್ಲಿ ನೀರಿನ ಪ್ರಮಾಣ 1,800 ಅಡಿ ಕೂಡ ತಲುಪಲಿಲ್ಲ. ಅನಂತರವೂ ಮಳೆಯಾಗದ್ದರಿಂದ ಜಲಾಶಯದ ನೀರಿನ ಪ್ರಮಾಣ ಕುಸಿಯುತ್ತಲೇ ಹೋಯಿತು. ಜತೆಗೆ ವಿದ್ಯುತ್‌ ಬೇಡಿಕೆಯೂ ಜಾಸ್ತಿಯಿದ್ದುದರಿಂದ ಇದ್ದ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಲಾಯಿತು. ಹೀಗಾಗಿ ನೀರಿನ ಸಂಗ್ರಹ ಕಡಿಮೆಯಾಗುತ್ತಲೇ ಇದೆ.

2003ರಲ್ಲಿ ಜಲಾಶಯದ ನೀರಿನಮಟ್ಟ 1,725 ಅಡಿವರೆಗೆ ಕುಸಿತ ಕಂಡಿತ್ತು. ಈ ಬಾರಿ ಇದನ್ನು ಮೀರುವ ಸಾಧ್ಯತೆ ಇದೆ. ಆದರೆ, ಎಲ್ಲವೂ ವಿದ್ಯುತ್‌ ಬೇಡಿಕೆಯ ಮೇಲೆ ನಿಂತಿದೆ. ಸದ್ಯ ರಾಜ್ಯದಲ್ಲಿ ಸರಾಸರಿ 9,300 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿದ್ದು, ಇದರಲ್ಲಿ ಶೇ.65-70ರಷ್ಟು ವಿದ್ಯುತ್‌ನ್ನು ಹೊರಗಡೆಯಿಂದ ಪಡೆಯಲಾಗುತ್ತಿದೆ. ರಾಜ್ಯದ ವಿವಿಧ ಜಲಾಶಯಗಳಲ್ಲಿ ಇರುವ ನೀರನ್ನು ಜತನದಿಂದ ಕಾಯ್ದುಕೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿರುವುದರಿಂದ ಸಾಧ್ಯವಾದಷ್ಟು ಕಡಿಮೆ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ವಾಸ್ತವವಾಗಿ ಈಗಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಗೆ ಬಳಸಿದಲ್ಲಿ 10 ದಿನದಲ್ಲಿ ಜಲಾಶಯ ಖಾಲಿಯಾಗುತ್ತದೆ. ಆದರೆ, ಹಾಗಾಗದಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿ ದಿನ ಸುಮಾರು 6 ಸಾವಿರ ಕ್ಯೂಸೆಕ್ಸ್ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತಿದೆ.

1,742 ಅಡಿಗೆ ನೀರಿನ ಮಟ್ಟ ಕುಸಿದರೆ ಮೊದಲ ಹಂತದಲ್ಲಿ ಲಿಂಗನಮಕ್ಕಿ ಜಲಾಶಯದ ತಟದಲ್ಲಿಯೇ ಉತ್ಪಾದಿಸಲಾಗುವ ವಿದ್ಯುತ್‌ ಘಟಕವನ್ನು ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಸ್ಲ್ಯೂಯೀಸ್‌ ಗೇಟ್‌ ಮೂಲಕ ನೀರನ್ನು ಬಿಡುಗಡೆ ಮಾಡಿ ಶರಾವತಿ ವಿದ್ಯುದಾಗಾರದಲ್ಲಿ ಮಾತ್ರ ವಿದ್ಯುತ್‌ ಉತ್ಪಾದಿಸಲು ಸಾಧ್ಯ. 1,715 ಅಡಿಗೆ ನೀರು ಕುಸಿತ ಕಂಡರೆ ಅಲ್ಲಿಗೆ ಸಂಪೂರ್ಣವಾಗಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ, ಹಾಗಾಗದಂತೆ ನೋಡಿಕೊಳ್ಳಲಾಗುತ್ತಿದ್ದು, ಇರುವ ನೀರನ್ನು ಮುಂದಿನ 50 ದಿನಗಳಿಗೆ ಸಮನಾಗಿ ಹಂಚಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ ಎನ್ನುತ್ತಾರೆ ಕಾರ್ಯ ನಿರ್ವಾಹಕ ಅಭಿಯಂತರ ಶಿವಕುಮಾರ್‌, ಸಹಾಯಕ ಅಭಿಯಂತರ ಕೃಷ್ಣಮೂರ್ತಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಸತೀಶ್‌.

ಮಳೆಯಾಗಲಿಲ್ಲ
ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಲಿಂಗನಮಕ್ಕಿ ಯೋಜನಾ ಪ್ರದೇಶದಲ್ಲಾಗಲಿ, ಜಲಾನಯನ ಪ್ರದೇಶಗಳಲ್ಲಾಗಲಿ ಇದುವರೆಗೆ ಹಿಂಗಾರು ಮಳೆಯಾಗಲಿ, ಮುಂಗಾರು ಪೂರ್ವ ಮಳೆಯಾಗಲಿ ಬಿದ್ದಿಲ್ಲ. ಜಲಾಶಯ ಸಂಪೂರ್ಣ ಖಾಲಿಯಾಗಿದೆ ಎನಿಸುತ್ತಿದೆ. ಜಲಾಶಯದ ಮುಖ್ಯ ಅಣೆಕಟ್ಟು ಪೂರ್ಣವಾಗಿ ಗೋಚರಿಸುತ್ತಿದೆ. ಜಲಾಶಯದ ಭಾಗದಲ್ಲಿ ಹುಲ್ಲುಗಳು ಬೆಳೆದಿದ್ದು, ಜಾನುವಾರುಗಳು ಮೇಯುತ್ತಿವೆ. ಬಿಸಿಲು ಹೆಚ್ಚುತ್ತಲೇ ಹೋಗಿ ವಿದ್ಯುತ್‌ ಉತ್ಪಾದನೆಗೂ ನೀರನ್ನು ಬಳಕೆ ಮಾಡಿದ್ರೆ ಈ ಬಾರಿ ಜಲಾಶಯದಲ್ಲಿ ದಾಖಲೆ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿಯೋದು ಮಾತ್ರ ಸತ್ಯ.

Advertisement

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next