ನವದೆಹಲಿ : ಭಾರತೀಯ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಗುಡುಗಿದ್ದಾರೆ.
ಕಿಬಿತೂದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸೇನೆ ಮತ್ತು ITBP ಸಿಬಂದಿಯ ಶೌರ್ಯವನ್ನು ಶ್ಲಾಘಿಸಿದ ಅಮಿತ್ ಶಾ, ಯಾರೂ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಲು ಸಾಧ್ಯವಿಲ್ಲ ಎಂದರು.
ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಚೀನಾದ ಬಲವಾದ ಆಕ್ಷೇಪದ ನಡುವೆ ಗೃಹ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
“ಭಾರತೀಯ ಭೂಮಿಯನ್ನು ಯಾರಾದರೂ ಅತಿಕ್ರಮಿಸುವ ಕಾಲ ಈಗ ಇಲ್ಲವಾಗಿದೆ. ಇಂದು ಯಾರೂ ಸೂಜಿಯ ಮೊನೆಯಷ್ಟು ಭೂಮಿಯನ್ನು ಸಹ ಅತಿಕ್ರಮಿಸಲು ಸಾಧ್ಯವಿಲ್ಲ” ಎಂದು ಬಲವಾದ ಸಂದೇಶ ರವಾನಿಸಿದರು.
ನಮ್ಮ ಐಟಿಬಿಪಿ ಜವಾನರಿಂದಾಗಿ ಇಡೀ ದೇಶ ಇಂದು ತಮ್ಮ ಮನೆಗಳಲ್ಲಿ ಶಾಂತಿಯುತವಾಗಿ ಮಲಗಿದೆ. ನಮ್ಮ ಗಡಿಯಲ್ಲಿ ಸೇನೆ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಇಂದು, ನಮ್ಮ ಮೇಲೆ ಕೆಟ್ಟ ಕಣ್ಣು ಹಾಕುವ ಶಕ್ತಿ ಯಾರಿಗೂ ಇಲ್ಲ ಎಂದು ನಾವು ಹೆಮ್ಮೆಯಿಂದ ಹೇಳಬಹುದು, ”ಎಂದರು.