Advertisement

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

06:33 AM Dec 27, 2024 | Team Udayavani |

2019ರಲ್ಲಿ  ಬಾಲಿವುಡ್‌ನಲ್ಲಿ ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಎಂಬ ಚಿತ್ರವೊಂದು ಮೂಡಿಬಂದಿತ್ತು. ಅದು, 2004ರಿಂದ 2009ರವರೆಗೆ ಪ್ರಧಾನಿ ಸಿಂಗ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಬರು ಅವರು ಬರೆದಿದ್ದ ಇದೇ ಹೆಸರಿನ ಪುಸ್ತಕಾಧಾರಿತ. ಇನ್ನು ಅದೇ ಚಿತ್ರದಲ್ಲಿ ಸಿಂಗ್‌ ಅವರ ಪಾತ್ರವನ್ನು ನಿರ್ವಹಿಸಿದ್ದು  ಬಾಲಿವುಡ್‌ನ‌ ಹಿರಿಯ ನಟ ಅನುಪಮ್‌ ಖೇರ್‌. ಚಿತ್ರದ ಬಗ್ಗೆ ಬಂದ ಅನಿಸಿಕೆಗಳು ಬೇರೆ ವಿಚಾರ. ಆದರೆ, ಸಂಜಯ್‌ ಬರು ಹಾಗೂ ಅನುಪಮ್‌ ಖೇರ್‌ ಅವರು ಡಾ. ಸಿಂಗ್‌ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.

Advertisement

 ಸಿಂಗ್‌ ರಾಜಕಾರಣಿ ಗುಣ ಮೈಗೂಡಿಸಿಕೊಳ್ಳಲಿಲ್ಲವೇ?
ಹೌದು, ಅಕ್ಷರಶಃ ನಿಜ. ಡಾ. ಸಿಂಗ್‌ ಅವರು ಮೇಧಾವಿ. ದೂರದೃಷ್ಟಿತ್ವವಿತ್ತು. ಅತ್ಯುತ್ತಮ ಕೆಲಸಗಾರ. ಆದರೆ, ಅವರಿಗೆ ರಾಜಕಾರಣ ಗೊತ್ತಿರಲಿಲ್ಲ. ಅದೊಂದನ್ನು ಅವರು ಕಲಿತಿದ್ದರೆ ರಾಜಕಾರಣದಲ್ಲಿ ಭದ್ರ ತಳಹದಿ ನಿರ್ಮಿಸಿಕೊಳ್ಳಬಹುದಿತ್ತು.

 ಸಂಪುಟ ಆಯ್ಕೆಯಲ್ಲಿ ಎಡವಿದ್ದರೆ?
ಡಾ. ಸಿಂಗ್‌ ಪ್ರತಿಯೊಂದನ್ನು ಅಳೆದೂ ತೂಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ, ಅವರಿಗೆ ತಮ್ಮ ಮಂತ್ರಿಮಂಡಲದ ಸದಸ್ಯರನ್ನು ತಾವೇ ಖುದ್ದಾಗಿ ಆರಿಸುವ ಸ್ವಾತಂತ್ರ್ಯವಿರಲಿಲ್ಲ. ಅವರು ಅದನ್ನು ಕೇಳಿ ಪಡೆಯಬಹುದಾಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ.

 ಅವರನ್ನು ಮೂಲೆ ಗುಂಪು ಮಾಡಲು ಯತ್ನಿಸಲಾಗಿತ್ತೇ?
ಕಾಂಗ್ರೆಸ್‌ ಪರಿಸ್ಥಿತಿ ಅನಿವಾರ್ಯತೆಗೆ ಸಿಲುಕಿ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿತ್ತು. ಹಾಗಾಗಿ ಕೆಲವು ವಿಚಾರಗಳಲ್ಲಿ ಸಿಂಗ್‌ ಅವರನ್ನು ಹಲ್ಲು ಕಿತ್ತ ಹಾವಿನಂತೆ ಕೂರಿಸಲು ಪ್ರಯತ್ನಗಳನ್ನು ನಡೆಸಲಾಗಿತ್ತು. ಆದರೆ, ಅವರು ಪ್ರಧಾನಿ ಕಚೇರಿಯ ಘನತೆ ಕಾಪಾಡುವಲ್ಲಿ ಯಶಸ್ವಿಯಾದರು.

 ನಿಮ್ಮ ಪ್ರಕಾರ ಸಿಂಗ್‌ ತಪ್ಪು ಮಾಡಿದ್ದರೇ?
ಹೌದು. 2 ತಪ್ಪು ಮಾಡಿದ್ದಾರೆ. ಯುಪಿಎ-1ರ ಮೊದಲ ಅವಧಿ ಮುಗಿಯುವಷ್ಟರಲ್ಲಿ ಸಿಂಗ್‌ ಜನಪ್ರಿಯತೆ ಹೆಚ್ಚಾಗಿತ್ತು. ಹಾಗಾಗಿ, 2009ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಪ್ರಧಾನಿ ಹುದ್ದೆಗೇರಬೇಕಿತ್ತು. ಹಾಗೆ ಮಾಡಲಿಲ್ಲ. ಎರಡನೆಯದಾಗಿ, ಕಾಂಗ್ರೆಸ್‌ ತಮ್ಮನ್ನು ಮೂಲೆಗೆ ತಳ್ಳಿ ರಾಹುಲ್‌ರನ್ನು ಮುನ್ನಲೆಗೆ ತರಲು ಯತ್ನಿಸುತ್ತಿದೆ ಎಂಬುದು ಮನವರಿಕೆಯಾದ ಕೂಡಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರಬರಬೇಕಿತ್ತು.

Advertisement

ಅವರಂತೆ ಬುದ್ಧಿವಂತನಾಗಬೇಕು… ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಚಿತ್ರದ ನಟ  ಖೇರ್‌ ಮಾತು

 ಸಿಂಗ್‌ ಪಾತ್ರ ನಿರ್ವಹಿಸುವುದು ಕಷ್ಟವಾಯಿತೇ?
ಮೊದಲಿಗೆ ನಾನು ಈ ಪಾತ್ರವನ್ನು ಒಲ್ಲೆ ಎಂದಿದ್ದೆ. ಅವರು ಇಂದಿನ ರಾಜಕಾರಣಿಯಾಗಿದ್ದರಿಂದ ಒಬ್ಬ ನಟನಾಗಿ ನಾನು ಅವರನ್ನು ತೆರೆಯ ಮೇಲೆ ಸಮರ್ಪಕವಾಗಿ ಬಿಂಬಿಸಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ನಂತರ ಧೈರ್ಯ ಮಾಡಿ ಒಪ್ಪಿಕೊಂಡೆ.

 ಪಾತ್ರ ನಿರ್ವಹಿಸುವ ಮುನ್ನ ಸಿಂಗ್‌ ಅವರನ್ನು ಭೇಟಿಯಾಗಲಿಲ್ಲವೇ?
ಇಲ್ಲ. ಅವರನ್ನು ಹೇಗೆ ಭೇಟಿಯಾಗಬೇಕೆಂದು ನನಗೆ ತಿಳಿಯಲಿಲ್ಲ. ನಾನು ಅವರನ್ನು ಟಿವಿಯಲ್ಲಿ, ಮತ್ತಿತರ ಕಡೆ ನೋಡಿದ್ದೆನಾದ್ದರಿಂದ ಅವರ ಹಾವಭಾವವನ್ನು ಅಭ್ಯಸಿಸಿದರೆ ಸಾಕೆಂದು ಭಾವಿಸಿದೆ. ಆದರೆ, ನಾಲ್ಕೈದು ತಿಂಗಳ ಶೂಟಿಂಗ್‌ ವೇಳೆ, ಅವರನ್ನು ಒಮ್ಮೆ ಮಾತನಾಡಿಸಿ, ಅವರ ಸಲಹೆಗಳನ್ನು ಪಡೆದಿದ್ದರೆ ಚೆನ್ನಾಗಿರುತ್ತಿತ್ತು.

 ನೀವು ಮೋದಿ ಬೆಂಬಲಿಗ. ಕಾಂಗ್ರೆಸ್‌ ನಾಯಕರ ಬಗ್ಗೆ ಸಿನಿಮಾ ಮಾ ಡುವುದು ಕಿರಿಕಿರಿ ಅನ್ನಿಸಿತೇ ?
ನಟನೆಯೇ ಬೇರೆ, ನನ್ನ ವೈಯಕ್ತಿಕ ಆಸಕ್ತಿಯೇ ಬೇರೆ ಎಂದು ನಂಬಿಕೊಂಡವನು ನಾನು. ಸಾಲದ್ದಕ್ಕೆ ಇಂಥ ಅವಕಾಶ ಪದೇ ಪದೇ ಬರುವುದಿಲ್ಲ. ಇದು ಸವಾಲಿನ ಪಾತ್ರವಾಗಿದ್ದರಿಂದ ಇದರಲ್ಲಿ ತಲ್ಲೀನನಾಗಿ ಹೇಗೆ ನಟಿಸಬಹುದು ಎಂದಷ್ಟೇ ಯೋಚಿಸಿದ್ದೆ. ಮತ್ಯಾವುದರ ಕಡೆಗೂ ನಾನು ಗಮನ ಹರಿಸಲಿಲ್ಲ.

 ಸಿಂಗ್‌ ಪಾತ್ರ ನಿರ್ವಹಣೆಯಿಂದ ನಿಮ್ಮ ಮೇಲಾದ ಪರಿಣಾಮವೇನು?
ಪಾತ್ರವನ್ನು ನಿರ್ವಹಿಸಿದ ನಂತರ ನನಗೆ, ನಾನು ಅವರಂತೆಯೇ ಮೇಧಾವಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನ್ನಿಸಿತು. ರಾಜಕೀಯ ಕಾರಣಗಳು ಏನೇ ಇರಲಿ. ಆದರೆ, ಒಂದಂತೂ ಸತ್ಯ. ಅವರು ಮಾಡಿದ ಸೇವೆ ಅನನ್ಯ. ಆ ಕಾರಣಕ್ಕಾಗಿಯೇ ಭಾರತದ ಜನ ಅವರನ್ನೆಂದೂ ಮರೆಯಲಾರರು.

Advertisement

Udayavani is now on Telegram. Click here to join our channel and stay updated with the latest news.

Next