ದಾವಣಗೆರೆ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಡಿ.24ರ ಮಂಗಳವಾರ ಸಂಜೆ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸಂಸದರು, ಮುಖಡರು, ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಅವಹೇಳಕಾರಿ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್‌ನ ಹೋರಾಟ ನಿಲ್ಲುವುದೇ ಇಲ್ಲ ಎಂದು ಎಚ್ಚರಿಸಿದರು. ಜೈ ಭೀಮ್, ಜೈ ಜೈ ಭೀಮ್, ಜೈ ಸಂವಿಧಾನ್… ಘೋಷಣೆ ಕೂಗಿದರು.
ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಕಳೆದ ನ.26 ರಂದು ದೇಶದ್ಯಾಂತ 75ನೇ ಸಂವಿಧಾನ ದಿನ ಆಚರಣೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾ ಎರಡು ದಿನಗಳ ಕಾಲ ಸಂವಿಧಾನ, ರಚನೆ, ನೀಡಿರುವ ಹಕ್ಕು, ನಿರ್ವಹಿಸಬೇಕಾಗಿರುವ ಕರ್ತವ್ಯಗಳ ಬಗ್ಗೆ ಎಲ್ಲ ಸದಸ್ಯರಿಗೆ ಅಭಿಪ್ರಾಯ ತಿಳಿಸುವ ಅವಕಾಶ ಮಾಡಿಕೊಟ್ಟಿದ್ದ ಸಂದರ್ಭದಲ್ಲಿ ಅಮಿತ್ ಶಾ ಅವರು, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದರೆ 7 ಜನ್ಮಕ್ಕೂ ಸ್ವರ್ಗ ಸಿಗುತ್ತದೆ… ಎಂಬ ಹೇಳಿಕೆ ನೀಡಿದ್ದು ಅತ್ಯಂತ ಖಂಡನೀಯ ಎಂದು ದೂರಿದರು.
ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಹಿನ್ನೆಲೆಯಿಂದಲೇ ದೇಶದ ಎಲ್ಲರಿಗೂ ಮತದಾನದ ಹಕ್ಕು ದೊರೆತಿದೆ. ಒಳ್ಳೆಯ ಪ್ರತಿನಿಧಿ ಆಯ್ಕೆ ಮಾಡುವ, ಒಳ್ಳೆಯ ಅಭಿವೃದ್ಧಿ ಕೆಲಸ, ಮೂಲಭೂತ ಸೌಲಭ್ಯ, ಹಕ್ಕು ದೊರೆತಿವೆ. ಅಂತಹ ಸೌಲಭ್ಯಗಳು, ಮೂಲಭೂತ ಹಕ್ಕುಗಳ ನೀಡಿರುವಂತಹ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಅವರು ಅವಮಾನವಾಗುವ ರೀತಿ ಹೇಳಿಕೆ ನೀಡಿರುವುದರ ವಿರುದ್ಧ ಎಲ್ಲರೂ ವಿರೋಧಿಸಲೇಬೇಕು ಎಂದರು.
ಅಂಬೇಡ್ಕರ್ ಅವರ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ರಾಜ್ಯ, ಲೋಕಸಭೆ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡಲಾಗುತ್ತಿದೆ. ರಾಷ್ಟ್ರಪತಿ ಅವರಿಗೂ ಪತ್ರ ಬರೆಯಲಾಗಿದೆ. ಕಾಂಗ್ರೆಸ್‌ನ 99 ಲೋಕಸಭಾ ಸದಸ್ಯ ರ ಎಲ್ಲ ಕ್ಷೇತ್ರದಲ್ಲಿ ಹೋರಾಟ ನಡೆಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಹಕ್ಕುಗಳ ನೀಡಿರುವ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಅವರು ರಾಜೀನಾಮೆ ನೀಡುವ ಜೊತೆಗೆ ದೇಶದ ಜನರ ಬಹಿರಂಗ ಕ್ಷಮೆ ಕೋರುವವರೆಗೂ ಕಾಂಗ್ರೆಸ್‌ನ ಹೋರಾಟ ನಿಲ್ಲುವುದೇ ಇಲ್ಲ ಎಂದು ಎಚ್ಚರಿಸಿದರು.
ಮೇಯರ್ ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಎ. ನಾಗರಾಜ್, ಬಿ.ಎಚ್. ವೀರಭದ್ರಪ್ಪ ಇತರರು ಇದ್ದರು.