ಹೊಸದಿಲ್ಲಿ: ಸುಮಾರು ಐದು ತಿಂಗಳ ಪ್ರತಿಭಟನೆಯ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಧರಣಿ ಪ್ರತಿಭಟನೆಯನ್ನು ನಾವು ನ್ಯಾಯಾಲಯಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಕುಸ್ತಿಪಟುಗಳು ಹೇಳಿಕೊಂಡಿದ್ದು, ಇನ್ನು ಕೋರ್ಟ್ ನಲ್ಲಿ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಆಡಳಿತಾರೂಢ ಬಿಜೆಪಿಯ ಸಂಸತ್ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಒಂದೇ ರೀತಿಯ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.
ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಹೋರಾಟವು ಮುಂದುವರಿಲಿದೆ. ಆದರೆ ಇನ್ನು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಕೋರ್ಟ್ ನಲ್ಲಿ ಇದು ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಚಿತ್ರೀಕರಣದ ವೇಳೆ ಅವಘಡ: ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಕಾಲಿಗೆ ಬಲವಾದ ಪೆಟ್ಟು
“ಡಬ್ಲ್ಯುಎಫ್‌ಐ (ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ) ಸುಧಾರಣೆಗೆ ಸಂಬಂಧಿಸಿದಂತೆ, ಭರವಸೆಯಂತೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದೆ. ಜುಲೈ 11 ರ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರವು ನೀಡಿದ ಭರವಸೆಗಳ ಈಡೇರಿಕೆಗಾಗಿ ನಾವು ಕಾಯುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ವಿನೇಶ್ ಪೋಗಟ್ ಮತ್ತು ಸಾಕ್ಷಿ ಮಲಿಕ್, ತಾವು ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ಕಾಲ ಬಿಡುವು ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಮತ್ತು ಹಿಂಬಾಲಿಸುವ ಆರೋಪಗಳನ್ನು ದಾಖಲಿಸಿದ ನಂತರ ಕುಸ್ತಿ ಪಟುಗಳು ಈ ನಡೆ ಕಂಡುಕೊಂಡಿದ್ದಾರೆ.