Advertisement

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

01:39 PM Nov 25, 2024 | Team Udayavani |

ಲಕ್ನೋ(ಉತ್ತರಪ್ರದೇಶ): ಉತ್ತರಪ್ರದೇಶದ ಸಂಭಲ್‌ ಪ್ರದೇಶ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂಸಾಚಾರದಿಂದ ನಲುಗಿ ಹೋಗಿದ್ದು, ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ ನಡೆದ ಪರಿಣಾಮ ಪೊಲೀಸರ ಗೋಲಿಬಾರ್‌ ಗೆ ಮೂವರು ಬಲಿಯಾಗಿದ್ದಾರೆ. ಸಂಭಾಲ್‌ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದಾಗಿ ವರದಿ ತಿಳಿಸಿದೆ.

Advertisement

ಮೊಘಲರ ಕಾಲದಲ್ಲಿ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿರುವುದಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಕೋರ್ಟ್‌, ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿತ್ತು.

ಕೋರ್ಟ್‌ ಆದೇಶದಂತೆ ಭಾನುವಾರ (ನ.24) ಮಸೀದಿ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಜನರ ಗುಂಪೊಂದು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಎಸ್ಪಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದರು.

ಹಿಂಸಾಚಾರದಲ್ಲಿ 20 ಮಂದಿ ಭದ್ರತಾ ಸಿಬಂದಿಗಳು ಗಾಯಗೊಂಡಿದ್ದರು. ಕಾನ್ಸ್‌ ಟೇಬಲ್‌ ವೊಬ್ಬರ ತಲೆಗೆ ಗಂಭೀರವಾಗಿ ಏಟು ಬಿದ್ದಿದ್ದು, ಜಿಲ್ಲಾಧಿಕಾರಿಗಳ ಕಾಲಿಗೆ ಪೆಟ್ಟು ಬಿದ್ದಿರುವ ಘಟನೆ ನಡೆದಿತ್ತು.

ಈಗ ಪರಿಸ್ಥಿತಿ ಹೇಗಿದೆ?

Advertisement

ಹಿಂಸಾಚಾರದಿಂದ ನಲುಗಿ ಹೋಗಿರುವ ಸಂಭಾಲ್‌ ನಲ್ಲಿ ಸಾಮಾಜಿಕ ಕಾರ್ಯಕರ್ತರು, ಜನಪ್ರತಿನಿಧಿಗಳು, ಹೊರಗಿನವರು (OutSiders) ಅಧಿಕಾರಿಗಳ ಅನುಮತಿ ಇಲ್ಲದೇ ಪ್ರವೇಶಿಸುವಂತಿಲ್ಲ ಹಾಗೂ ಜಲ್ಲಿ ಮಾರಾಟ ನಿಷೇಧಿಸಿರುವುದಾಗಿ ಸಂಭಾಲ್‌ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

24 ಗಂಟೆಗಳ ಕಾಲ ಸಂಭಾಲ್ ನಲ್ಲಿ ಇಂಟರ್ನೆಟ್‌ ಸರ್ವೀಸ್‌ ಅನ್ನು ರದ್ದುಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್‌ 25ರಂದು ಪಿಯುಸಿವರೆಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಮನೆಗಳ ಮಹಡಿ ಮೇಲಿನಿಂದ ಹಾಗೂ ಶಾಹಿ ಜಾಮಾ ಮಸೀದಿ ಮುಂಭಾಗದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಚಪ್ಪಲಿ, ಕಲ್ಲು, ಇಟ್ಟಗಿಗಳನ್ನು ಎಸೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸರ ಗುಂಡಿನ ದಾಳಿಯಲ್ಲಿ ನಯೀಮ್‌, ಬಿಲಾಲ್‌ ಹಾಗೂ ನೂಮಾನ್‌ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಪೊಲೀಸರು ಆರಂಭದಲ್ಲೇ ಗೋಲಿಬಾರ್‌ ಮಾಡಿದ್ದರು ಎಂಬ ಆರೋಪವನ್ನು ಜಿಲ್ಲಾಧಿಕಾರಿ ತಳ್ಳಿಹಾಕಿದ್ದು, ಪೊಲೀಸರು ಮೊದಲಿಗೆ ಪೆಲ್ಲೆಟ್‌ ಗನ್ಸ್‌ ಬಳಕೆ ಮಾಡಿರುವುದಾಗಿ ಸಮಜಾಯಿಷಿ ನೀಡಿದ್ದರು.

ಈವರೆಗೆ 21 ಮಂದಿಯನ್ನು ಬಂಧಿಸಲಾಗಿದ್ದು, ವಿವಿಧ ಬಗೆಯ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ. ಇಬ್ಬರು ಮಹಿಳೆಯರು ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದೆ ಎಂದು ಬಿಂಬಿಸಲಾಗುತ್ತಿದ.

ಪ್ರಕರಣದಲ್ಲಿ ಶಾಮೀಲಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(NSA)ಯಡಿ ಎಫ್‌ ಐಆರ್‌ ದಾಖಲಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next