ಇಂಫಾಲ್: ಜಿರಿಬಾಮ್ ನಲ್ಲಿ ಆರು ಒತ್ತೆಯಾಳುಗಳ ಸಾವನ್ನು ಪ್ರತಿಭಟಿಸಿ, ಗುಂಪೊಂದು ಶನಿವಾರ (ನ.16) ಸಂಜೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರ ಖಾಸಗಿ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದೆ. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಮತ್ತೊಂದು ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಹಾರಿಸಬೇಕಾಯಿತು.
ಎಂಟು ತಿಂಗಳ ಹಸುಳೆ ಸೇರಿದಂತೆ ನಾಪತ್ತೆಯಾದ ಆರು ಮಂದಿಯ ಶವಗಳನ್ನು ಮಣಿಪುರ ನದಿಯಿಂದ ವಶಪಡಿಸಿಕೊಂಡ ಒಂದು ದಿನದ ನಂತರ ಪ್ರತಿಭಟನೆಗಳು ನಡೆದಿವೆ. ಸೋಮವಾರ ನಡೆದ ಹಿಂಸಾಚಾರದ ನಂತರ 10 ಶಸ್ತ್ರಸಜ್ಜಿತ ಕುಕಿ ಉಗ್ರರು ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದಾಗ ಆರು ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು.
ಕಳೆದ ವಾರ, ರಾಜ್ಯದ ಜಿರಿಬಾಮ್ ಜಿಲ್ಲೆಯಲ್ಲಿ ಕುಕಿ ಬುಡಕಟ್ಟು ಸಮುದಾಯದ ಹ್ಮಾರ್ ಗುಂಪಿನ 31 ವರ್ಷದ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು.
ಸರ್ಕಾರದಿಂದ ನಿಷ್ಕ್ರಿಯತೆ ಮತ್ತು ಸಂವಹನದ ಕೊರತೆಯಿಂದ ಅಸಮಾಧಾನಗೊಂಡ ದೊಡ್ಡ ಜನಸಮೂಹವು ಶನಿವಾರ ರಾಜ್ಯ ರಾಜಧಾನಿ ಇಂಫಾಲ್ನಲ್ಲಿ ಶಾಸಕರನ್ನು ಭೇಟಿ ಮಾಡಲು ಒತ್ತಾಯಿಸಿತು.
ಮಧ್ಯರಾತ್ರಿ ಪ್ರತಿಭಟನಾಕಾರರು ಕನಿಷ್ಠ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಐದು ಜಿಲ್ಲೆಗಳಲ್ಲಿ ಅನಿರ್ದಿಷ್ಟ ಅವಧಿಗೆ ನಿಷೇಧಾಜ್ಞೆ ವಿಧಿಸಿ ಸರ್ಕಾರ ಆದೇಶಿಸಿದೆ. ಅಲ್ಲದೆ ರಾಜ್ಯದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತು.
ಮಣಿಪುರ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ಅಥವಾ AFSPA ಯನ್ನು ಪರಿಶೀಲಿಸಲು ಮತ್ತು ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ ವಿನಂತಿಸಿದೆ. ಸಶಸ್ತ್ರ ಪಡೆಗಳಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುವ ವಿವಾದಾತ್ಮಕ ಕಾನೂನು ಇದಾಗಿದ್ದು, ಇದನ್ನು ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪುನಃ ಜಾರಿಗೊಳಿಸಲಾಗಿದೆ.