Advertisement

Bidar: ವಕ್ಫ್‌ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ

11:55 AM Nov 25, 2024 | Team Udayavani |

ಬೀದರ್:‌ ವಕ್ಫ್ ಭೂಮಿ ವಿರುದ್ಧ ಐದು ಜಿಲ್ಲೆಗಳಲ್ಲಿ ಶಾಸಕರಾದ ಬಸವನಗೌಡ ಪಾಟೀಲ‌ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ನೇತೃತ್ವದ ಬಿಜೆಪಿಯ ರೆಬಲ್ಸ್‌ ಟೀಂ ಆಯೋಜಿಸಿರುವ ‘ವಕ್ಫ್ ಹಠಾವೋ -ಭಾರತ್ ದೇಶ್ ಬಚಾವೋʼ ಹೋರಾಟಕ್ಕೆ ಸೋಮವಾರ (ನ.25) ಗಡಿ‌ ಜಿಲ್ಲೆ ಬೀದರನಿಂದ ಚಾಲನೆ ನೀಡಲಾಗಿದೆ.

Advertisement

ನಗರದ ಝರಣಿ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ವಕ್ಫ್ ವಿರುದ್ಧ ಈ ತಂಡ ಹೋರಾಟ ಶುರು ಮಾಡಿದ್ದು, ಡಿ. 1ರ ವರೆಗೆ ಐದು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದೆ. ಈ ವೇಳೆ ವಕ್ಫ್ ಬೋರ್ಡ್ ನಿಂದ ಅನ್ಯಾಯಕ್ಕೆ ಒಳಗಾದ ರೈತರು ಮತ್ತು ಮಠಾಧಿಶರಿಂದ‌ ಅಹವಾಲು ಸ್ವೀಕರಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿದ್ದಾರೆ. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಅವರ ಸಾಥ್ ನೀಡಿದ್ದಾರೆ.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಬೀದರ ತಾಲೂಕಿನ ಧರ್ಮಾಪುರ, ಚಟ್ನಳ್ಳಿ ಗ್ರಾಮಗಳಿಗೆ ರೆಬಲ್ಸ್‌ ಟೀಂ ಭೇಟಿ ನೀಡಲಿದೆ. ಅಲ್ಲಿ ವಕ್ಫ್‌ನಿಂದ ತೊಂದರೆಗೆ ಒಳಗಾದ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದೆ. ಕೆಲ ದಿನಗಳ ಹಿಂದೆಯಷ್ಟೇ 26 ಎಕ್ರೆಯ ಇಡೀ ಗ್ರಾಮವೇ ವಕ್ಫ್‌ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿತ್ತು, ಇದರಿಂದ ಜನ ಕಂಗಾಲಾಗಿದ್ದರು. ಹಾಗಾಗಿ ಇಲ್ಲಿನ ಜನರೊಟ್ಟಿಗೆ ಈ ತಂಡ ಸಮಾಲೋಚನೆ ನಡೆಸಲಿದೆ.

ಮ. 12 ಗಂಟೆ ಸುಮಾರಿಗೆ ಬೀದರನ ಗಣೇಶ ಮೈದಾನದಲ್ಲಿ ಸಭೆ ನಡೆಸಿ ರೈತರು, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದೆ. ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದೆ.

ಸಂಜೆ 4 ಗಂಟೆಗೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದೆ. ಸುಮಾರು 300 ರೈತ ಕುಟುಂಬಗಳ 960 ಎಕರೆ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖವಾಗಿದ್ದ ಚಟ್ನಳ್ಳಿ ಗ್ರಾಮಕ್ಕೆ ಶಾಸಕರ ತಂಡ ಭೇಟಿ ನೀಡಲಿದೆ.

Advertisement

ಸ್ಥಳೀಯ ಶಾಸಕರು ಗೈರು

ವಕ್ಫ್‌ ಮಂಡಳಿ ವಿರುದ್ಧ ಬೀದರನಿಂದ ಆರಂಭವಾಗಲಿರುವ ಯತ್ನಾಳ್‌ ನೇತೃತ್ವದ ಹೋರಾಟದಲ್ಲಿ ಜಿಲ್ಲೆಯ ಯಾವುದೇ ಬಿಜೆಪಿ ಶಾಸಕರು ಭಾಗವಹಿಸಿಲ್ಲ. ಇದು ಬಿಜೆಪಿ ಅಧಿಕೃತ ಕಾರ್ಯಕ್ರಮ ಅಲ್ಲ, ಪಕ್ಷದಿಂದ ಯಾವುದೇ ಸಂದೇಶ ಬಂದಿಲ್ಲ. ಹಾಗಾಗಿ‌ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next