ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಫಾಲೋಆನ್‌ಗೆ ಸಿಲುಕಿದೆ. ಸತತ ಎರಡನೇ ಸೋಲಿನತ್ತ ಮುಖ ಮಾಡಿದೆ.
ನ್ಯೂಜಿಲೆಂಡ್‌ನ 580 ರನ್ನುಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಶ್ರೀಲಂಕಾ 164ಕ್ಕೆ ಕುಸಿಯಿತು. 416 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಲಂಕಾ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, 2 ವಿಕೆಟಿಗೆ 113 ರನ್ ಮಾಡಿದೆ. ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 303 ರನ್ ಪೇರಿಸಬೇಕಿದೆ.
ಲಂಕೆಯ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ದಿಮುತ್ ಕರುಣಾರತ್ನೆ ಮಾತ್ರ ಕಿವೀಸ್ ದಾಳಿಯನ್ನು ತಡೆದು ನಿಲ್ಲಲು ಯಶಸ್ವಿಯಾದರು. ಅವರದು ಸರ್ವಾಧಿಕ 89 ರನ್ ಗಳಿಕೆ. ದಿನೇಶ್ ಚಂಡಿಮಾಲ್ 37 ರನ್ ಮಾಡಿದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಮತ್ತು ಮೈಕಲ್ ಬ್ರೇಸ್‌ವೆಲ್ ತಲಾ 3 ವಿಕೆಟ್ ಕೆಡವಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕರುಣಾರತ್ನೆ ಕಪ್ತಾನನ ಆಟವಾಡಿ 51 ರನ್ ಹೊಡೆದರು. ಕುಸಲ್ ಮೆಂಡಿಸ್ 50 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್-4 ವಿಕೆಟಿಗೆ 580 ಡಿಕ್ಲೇರ್. ಶ್ರೀಲಂಕಾ-164 (ಕರುಣಾರತ್ನೆ 89, ಚಂಡಿಮಾಲ್ 37, ಹೆನ್ರಿ 44ಕ್ಕೆ 3, ಬ್ರೇಸ್‌ವೆಲ್ 50ಕ್ಕೆ 3) ಮತ್ತು 2 ವಿಕೆಟಿಗೆ 113 (ಕರುಣಾರತ್ನೆ 51, ಮೆಂಡಿಸ್ ಬ್ಯಾಟಿಂಗ್ 50).