ಚೆನ್ನೈ: ಗಡಿ ಉಲ್ಲಂಘನೆ ಆರೋಪದ ಮೇಲೆ ತಮಿಳುನಾಡಿನ 17 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ (ಡಿ.24) ಬಂಧಿಸಿದೆ.
ಮೀನುಗಾರರ ಬಂಧನದ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ತಮಿಳುನಾಡಿನ ರಾಮೇಶ್ವರಂನ 17 ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ಅವರ ಎರಡು ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ಡಿಸೆಂಬರ್ 24, 2024 ರಂದು ವಶಪಡಿಸಿಕೊಂಡಿದೆ.
ಅಲ್ಲದೆ, ಡಿ. 20 ರಂದು ಶ್ರೀಲಂಕಾದ 6 ಅಪರಿಚಿತ ವ್ಯಕ್ತಿಗಳು ನಾಗಪಟ್ಟಣಂ ಜಿಲ್ಲೆಯ ಕೊಡಿಯಕ್ಕರೈ ಮೀನುಗಾರರ ಮೇಲೆ ದಾಳಿ ನಡೆಸಿದ್ದು ದಾಳಿಕೋರರು ಮೀನುಗಾರಿಕಾ ಬೋಟ್ಗಳಿಂದ ಜಿಪಿಎಸ್ ಉಪಕರಣಗಳು, ವಿಎಚ್ಎಫ್ ಉಪಕರಣಗಳು, ಮೀನುಗಾರಿಕಾ ಬಲೆ, ಮೊಬೈಲ್ ಫೋನ್ ಮತ್ತು ಅವರ ಮೀನುಗಳನ್ನು ದೋಚಿದ್ದಾರೆ ಎಂದು ಸಿಎಂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಬಂಧಿತ ಮೀನುಗಾರರನ್ನು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ತಕ್ಷಣವೇ ಬಿಡುಗಡೆ ಮಾಡಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಿ “ಭವಿಷ್ಯದಲ್ಲಿ ಇಂತಹ ದಾಳಿಗಳು ಸಂಭವಿಸದಂತೆ ನೋಡಿಕೊಳ್ಳಲು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.