ಸಿಡ್ನಿ: ಬಾರ್ಡರ್ ಗಾವಸ್ಕರ್ ಟ್ರೋಫಿ ಅಂತಿಮ, ನಿರ್ಣಾಯಕ ಪಂದ್ಯದಲ್ಲಿಯೂ ಭಾರತದ ಪರದಾಟ ಮುಂದುವರಿದಿದೆ. ಸಿಡ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕೇವಲ 185 ರನ್ ಗಳಿಗೆ ಆಲೌಟಾಗಿದೆ.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಬದಲಿಗೆ ಇಂದು ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದಾರೆ. ರೋಹಿತ್ ಮತ್ತು ಆಕಾಶ್ ದೀಪ್ ಬದಲಿಗೆ ಗಿಲ್ ಮತ್ತು ಪ್ರಸಿಧ್ ಕೃಷ್ಣ ಆಡುವ ಅವಕಾಶ ಪಡೆದಿದ್ದಾರೆ.
ಮತ್ತೆ ಆರಂಭಿಕರಾಗಿ ಆಡಿದ ರಾಹುಲ್ ನಾಲ್ಕು ರನ್ ಗೆ ಔಟಾದರು. ಜೈಸ್ವಾಲ್ ಕೂಡಾ 10 ರನ್ ಗೆ ವಿಕೆಟ್ ಒಪ್ಪಿಸಿದರು. ಗಿಲ್ 20 ರನ್ ಮಾಡಿದರೆ, ವಿರಾಟ್ ಹೊರಹೋಗುವ ಚೆಂಡನ್ನು ಆಡುವ ಹಳೇಯ ಚಾಳಿ ಮುಂದುವರಿಸಿ 17 ರನ್ ಗೆ ಔಟಾದರು.
ಎಂಸಿಜಿ ಪಂದ್ಯದಲ್ಲಿ ಕಳಪೆ ಆಟದಿಂದ ಟೀಕೆಗೆ ಗುರಿಯಾಗಿದ್ದ ಪಂತ್ ಇಂದು ಬೇರೆಯದೇ ಆಟವಾಡಿದರು. ಆಸೀಸ್ ವೇಗಿಗಳ ಚೆಂಡಿಗೆ ಮೈಯೊಡ್ಡಿ ಆಡಿದ ಪಂತ್ 98 ಎಸೆತಗಳಲ್ಲಿ 40 ರನ್ ಮಾಡಿದರು. ಜಡೇಜಾ 28 ರನ್ ಮಾಡಿದರು. ಕಳೆದ ಪಂದ್ಯದ ಶತಕವೀರ ರೆಡ್ಡಿ ಗೋಲ್ಡನ್ ಡಕ್ ಗೆ ಬಲಲಿಯಾದರು. ಕೊನೆಯಲ್ಲಿ ನಾಯಕ ಬುಮ್ರಾ 22 ರನ್ ಮಾಡಿದರು.
ಆಸ್ಟ್ರೇಲಿಯಾ ಬೌಲರ್ ಗಳು ಅತ್ಯಂತ ಶಿಸ್ತಿನ ಬೌಲಿಂಗ್ ದಾಳಿ ಸಂಘಟಿಸಿದರು. 20 ಓವರ್ ಬಾಲ್ ಮಾಡಿದ ಸ್ಕಾಟ್ ಬೊಲ್ಯಾಂಡ್ ಕೇವಲ 31 ರನ್ ನೀಡಿ ನಾಲ್ಕು ವಿಕೆಟ್ ಒಪ್ಪಿಸಿದರು. ಸ್ಟಾರ್ಕ್ ಮೂರು, ನಾಯಕ ಕಮಿನ್ಸ್ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಲಿಯಾನ್ ಪಾಲಾಯಿತು.
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ 9 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದೆ. ಖ್ವಾಜಾ 2 ರನ್ ಮಾಡಿ ಬುಮ್ರಾಗೆ ಬಲಿಯಾದರು.