“ರಾಂಗ್ ನ್ಯೂಸ್…’ ಇದು ಸುದೀಪ್ ಮಾಡಿರುವ ಟ್ವೀಟ್. ಹೌದು, ಸುದೀಪ್ “ಆ ಸುದ್ದಿ ಸುಳ್ಳು’ ಅಂತ ಹೇಳ್ಳೋಕೆ ಕಾರಣ, ತಮಿಳು ಚಿತ್ರವೊಂದರಲ್ಲಿ ಸುದೀಪ್ ಅವರು ವಿಲನ್ ಆಗಿ ನಟಿಸಲಿದ್ದಾರೆ ಎಂದು ಹರಿದಾಡಿದ ಸುದ್ದಿಗೆ. ಅಷ್ಟಕ್ಕೂ ಸುದೀಪ್ ಬಗ್ಗೆ ಬಂದ ಸುದ್ದಿ ಏನು ಗೊತ್ತಾ? ಕಾಲಿವುಡ್ ನಟ ಸಿಲಂಬರಸನ್ ಅಭಿನಯದ “ಮಾನಾಡು’ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.
ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್ ಅವರನ್ನು ಭೇಟಿ ಮಾಡಿ, ಕಥೆಯನ್ನು ಹೇಳಿದ್ದು, ಆ ಕಥೆ, ಪಾತ್ರವನ್ನು ಸುದೀಪ್ ಕೂಡ ಒಪ್ಪಿದ್ದಾರಂತೆ ಎಂಬ ಮಾತುಗಳು ಹರಿದಾಡಿದ್ದವು. ಬಹುತೇಕರು ಆ ಸುದ್ದಿ ನಿಜ ಇರಬಹುದೇನೋ ಅಂತಂದುಕೊಂಡಿದ್ದರು. ಈ ಸುದ್ದಿ ಸುದೀಪ್ ಅವರ ಕಿವಿಗೆ ಬಿದ್ದದ್ದೇ ತಡ, ಅವರು, ತಮ್ಮ ಟ್ವಿಟ್ಟರ್‌ನಲ್ಲಿ “ರಾಂಗ್ ನ್ಯೂಸ್’ ಅಂತ ಬರೆದುಕೊಂಡಿದ್ದಾರೆ.
ಒಂದು ಗಾಳಿ ಸುದ್ದಿ ಎಷ್ಟು ಜೋರಾಗಿ ಹರಡಿತ್ತೋ, ಅಷ್ಟೇ ವೇಗವಾಗಿಯೂ, ಸುದೀಪ್ ಅವರು ಮಾಡಿರುವ ಟ್ವೀಟ್ ಕೂಡ ತಲುಪಿದೆ. ‘ಮಾನಾಡು’ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಒಪ್ಪಿಕೊಂಡಿರುವ ಸುದ್ದಿ ಸುಳ್ಳು ಎಂದು ಹೇಳುವ ಮೂಲಕ ಎಲ್ಲಾ ಅಂತೆ-ಕಂತೆಗಳಿಗೂ ಸುದೀಪ್ ತೆರೆ ಎಳೆದಿದ್ದಾರೆ. ಅಂದಹಾಗೆ, ಸುದೀಪ್ ಈಗಾಗಲೇ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವುದುಂಟು. ನೆಗೆಟಿವ್ ಪಾತ್ರ ಮೂಲಕ ಗಮನಸೆಳೆದಿದ್ದಾರೆ.
ಅವರು “ದಬಾಂಗ್ 3′ ಚಿತ್ರದಲ್ಲೂ ಮೊದಲ ಸಲ ಸಲ್ಮಾನ್‌ಖಾನ್ ಅವರ ಎದುರು ವಿಲನ್ ಆಗಿ ಆರ್ಭಟಿಸಿದ್ದರು. ಅದರ ಬೆನ್ನ ಹಿಂದೆಯೇ, ತಮಿಳು ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಗಾಳಿ ಸುದ್ದಿಗೆ ಸುದೀಪ್ ಅವರೇ ತೆರೆ ಎಳೆಯುವ ಮೂಲಕ, ತಾವು ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿನಯದ “ಕೋಟಿಗೊಬ್ಬ-3′ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.
ಈ ನಡುವೆ ಸುದೀಪ್ ಅವರು “ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲೂ ಬಿಝಿಯಾಗಿದ್ದಾರೆ. ಇದು ಮುಗಿದ ಬಳಿಕ ಸುದೀಪ್ ಅವರು ನಿರ್ದೇಶನಕ್ಕಿಳಿಯಲಿದ್ದಾರೆ ಎಂಬ ಮಾತುಗಳೂ ಇವೆ. ಈ ಮಧ್ಯೆ, ಜಾಕ್‌ಮಂಜು ನಿರ್ಮಾಣದ ಅನೂಪ್ ಭಂಡಾರಿ ನಿದೇಶನದ ಚಿತ್ರವೂ ಸೆಟ್ಟೇರಬೇಕಿದೆ. ಮೊದಲು ನಟನೆ ಮಾಡುತ್ತಾರೋ ಅಥವಾ ತಮ್ಮ ನಿರ್ದೇಶನದ ಜೊತೆಯಲ್ಲಿ ನಟಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.