ಮಂಗಳೂರು: ಸಾಮಾಜಿಕ ಸಮಾನತೆಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮನೆ ಮನೆಗೂ ತಲುಪುವಂತಾದರೆ ಸಾಮಾಜಿಕ ಸಾಮರಸ್ಯ ಶಾಶ್ವತವಾಗಿ ನೆಲೆಗೊಳ್ಳಲು ಸಾಧ್ಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಕಾರದೊಂದಿಗೆ ಕುದ್ರೋಳಿ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ದಮನಿತ ಧ್ವನಿ ಒಂದು ಕಾಲದಲ್ಲಿ ದಮನಿತ ಸಮಾಜಕ್ಕೆ ಧ್ವನಿ ಇಲ್ಲದಂತಹ ಸಮಯದಲ್ಲಿ ಅವರಿಗೆ ಆಸರೆಯಾಗಿ ನಿಂತು, ಮನುಷ್ಯ ಪ್ರೀತಿಯೇ ಮೊದಲ ಧರ್ಮ ಎಂದು ಸಾರಿ ಹೇಳಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ದೇವಸ್ಥಾನ ಪ್ರವೇಶ ಇಲ್ಲದಂತಹ ಸಮಾಜವನ್ನು ಮುನ್ನಡೆಗೆ ತಂದು ಅವರ ಬದುಕಿಗೆ ಹೊಸ ದಾರಿ ತೋರಿದವರು ಅವರು. ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಸದೃಢಗೊಳಿಸುವ ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸಾಮಾಜಿಕ ಕ್ರಾಂತಿ ನಡೆದಿದೆ ಎಂದವರು ವಿವರಿಸಿದರು.
ಮಂಗಳೂರು ಮೇಯರ್ ಕವಿತಾ ಸನಿಲ್ ಮಾತನಾಡಿ, ನಾರಾಯಣ ಗುರುಗಳ ತಣ್ತೀಗಳನ್ನು ಪಾಲಿಸುವ ಮನಸ್ಥಿತಿ ಇಂದು ಕಡಿಮೆಯಾಗುತ್ತಿದ್ದು, ಕೆಲವೆಡೆಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಎದುರಾಗುತ್ತಿದೆ. ನಾರಾಯಣ ಗುರುಗಳು ಸಾರಿದ ಪ್ರತಿಯೊಂದು ಸಂದೇಶವನ್ನೂ ನಾವು ಚಾಚೂ ತಪ್ಪದೆ ಪಾಲಿಸಿದರೆ ಹಾಗೂ ಅದು ಮನೆ ಮನೆಯಲ್ಲೂ ಅನುಷ್ಠಾನವಾದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಗುರುಗಳ ಬದುಕೇ ಆದರ್ಶ
ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ಅವರು ಸಂದೇಶ ನೀಡಿ, ಯಾವುದೇ ಪವಾಡ, ಜ್ಞಾನ ಪ್ರದರ್ಶನ ಮಾಡದೆ ನಾರಾಯಣ ಗುರುಗಳು ಮಾನವ ಪ್ರೀತಿಯನ್ನು ಸಮಾಜಕ್ಕೆ ಸಾರಿದರು. ಜನಸಾಮಾನ್ಯರ ಜತೆಗಿನ ಅವರ ಬದುಕೇ ನಮಗೆ ಆದರ್ಶ ಎಂದವರು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ. ಸುರೇಶ್ ಬಲ್ಲಾಳ್, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎಂ.ಬಿ. ನಾಯ್ಕ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್, ಪ್ರಮುಖರಾದ ರವಿಶಂಕರ ಮಿಜಾರು, ಮಹೇಶ್ಚಂದ್ರ ಮುಂತಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.