Advertisement

Mangaluru; ಒಡಿಶಾದ ಗುಜ್ಜೆದೋಸೆ ಈಗ ಕರಾವಳಿಯಲ್ಲೂ ಪ್ರಯೋಗ

01:10 PM Dec 24, 2024 | Team Udayavani |

ಮಹಾನಗರ: ಕರಾವಳಿ ಸೇರಿದಂತೆ ಕರ್ನಾಟಕದ ಹಲವೆಡೆ ಹಲಸಿನ ಉಪಯೋಗ ಭರ್ಜರಿಯಾಗಿಯೇ ಆಗುತ್ತಿದೆ. ಹಲಸಿನ ಹಣ್ಣಿನ ವಿಧಗಳು, ಅದರ ಉಪಯೋಗದ ಮೌಲ್ಯವರ್ಧನೆ, ಪ್ರಯೋಗಕ್ಕೆ ಹೊಸ ಸೇರ್ಪಡೆ-ಗುಜ್ಜೆ ದೋಸೆ.

Advertisement

ಹಲಸು ಬೆಳೆಯುವ ಪ್ರದೇಶಗಳಲ್ಲಿ ಗುಜ್ಜೆ ಅಥವಾ ಎಳೆಯ ಹಲಸನ್ನು ದೋಸೆಗೆ ಬಳಸುವುದು ಪ್ರಚಲಿತವಾಗಿಲ್ಲ. ಆದರೆ ದೂರದ ಒಡಿಶಾದಲ್ಲಿ ಹಲಸಿನ ವಿಚಾರಸಂಕಿರಣವೊಂದರಲ್ಲಿ ಅಲ್ಲಿನ ಮಹಿಳೆ ಮಾಡಿದ್ದ ಗುಜ್ಜೆಯ ದೋಸೆ ಈಗ ಕರ್ನಾಟಕ, ಕೇರಳದ ಹಲವು ಮನೆಗಳಲ್ಲೂ ಗುಜ್ಜೆ ದೋಸೆ ಮೇಲೆ ಪ್ರೀತಿ ಉಕ್ಕಿದೆ.

ಕೃಷಿ, ಜಲ ತಜ್ಞ ಶ್ರೀಪಡ್ರೆ ಅವರು ಕೆಲವು ದಿನಗಳಹಿಂದೆ ಭುವನೇಶ್ವರದಲ್ಲಿ ನಡೆದ ಜ್ಯಾಕ್‌ ಫ್ರುಟ್‌ ಮಿಷನ್‌ನವರ ಹಲಸು ಮೌಲ್ಯವರ್ಧನೆ ಕುರಿತ ವಿಚಾರ ಸಂಕಿರಣಕ್ಕೆ ಹೋಗಿದ್ದರು. ಅಲ್ಲಿ ಪುಷ್ಪಾ ಪಾಂಡ ಎನ್ನುವ ಮಹಿಳೆ ಗುಜ್ಜೆ ದೋಸೆಯನ್ನು ಮಾಡಿ ಎಲ್ಲರಿಗೂ ನೀಡಿದ್ದರು. ಇದನ್ನು ಗಮನಿಸಿದ ಪಡ್ರೆ ಅದರ ಫೋಟೋ ಹಾಗೂ ವಿವರಗಳನ್ನು ಕೆಲವು ಸಾವಯವ ಕೃಷಿಕರು, ಆಸಕ್ತರೊಂದಿಗೆ ಹಂಚಿಕೊಂಡರು.

ಇದರ ಪರಿಣಾಮವಾಗಿ ಕಾಸರಗೋಡಿನ ಮಹೇಶ್‌ ಕಣಿಯೂರು ಎನ್ನುವವರು ದೋಸೆ ಮಾಡಿ ಖುಷಿಪಟ್ಟರು. ಪಾಕಶಾಸ್ತ್ರ ಲೇಖಕಿಯಾದ ಸವಿತಾ ಭಟ್‌ ಅಡ್ವಾಯಿ ಅವರು ಈ ದೋಸೆಯನ್ನು ಸಾದಾ ರೀತಿಯಲ್ಲಿ ಅಕ್ಕಿ, ಗುಜ್ಜೆ, ಉಪ್ಪು ಮಾತ್ರ ಹಾಕಿ ಹಾಗೂ ಅದಕ್ಕೆ ನೀರುಳ್ಳಿ, ಹುಣಸೆ ಹುಳಿ, ಕೊತ್ತಂಬರಿ, ಜೀರಿಗೆ ಹಾಕಿ ಸ್ವಲ್ಪ ಮಸಾಲೆ ಶೈಲಿಯಲ್ಲಿ ಮಾಡಿದ್ದಾರೆ. ಅವರ ಪ್ರಕಾರ ಎರಡನೇ ವಿಧಕ್ಕೆ ಹೆಚ್ಚು ರುಚಿಯಂತೆ. ಶೀಲಾ ಭಟ್‌ ಅವರೂ ದೋಸೆ ಸಿದ್ಧಪಡಿಸಿ, ಹಿತ್ತಲಿನ ಮರದ ಗುಜ್ಜೆ ಸದುಪಯೋಗ ಆದೀತು ಎಂದಿದ್ದಾರೆ. ಅದು ಕರಾವಳಿಯ ಖಾದ್ಯ ವೈವಿಧ್ಯಕ್ಕೊಂದು ಆರೋಗ್ಯಕರ ಸೇರ್ಪಡೆಯಾಗುವುದು ಖಂಡಿತ ಎನ್ನು ವುದು ಪಡಾರು ಸುಮಾ ಶಾತ್ರಿ ಅವರ ಹೇಳಿಕೆ. ಉಪ್ಪಿನಂಗಡಿಯ ಶೀಲಾ ಉಮೇಶ್‌ ಅವರು ಗುಜ್ಜೆ ಪರೋಟಾ ಮಾಡಿದರಂತೆ.

ಒಡಿಶಾ ಸಹಿತ ಹಲವು ಉತ್ತರದ ರಾಜ್ಯ ಗಳಲ್ಲಿ ಹಲಸಿನ ಗುಜ್ಜೆ ಮಾತ್ರವೇ ಉಪಯೋಗ, ಅವರಿಗೆ ಅದರ ಬಲಿತ ಕಾಯಿ, ಹಣ್ಣಿನ ಉಪಯೋಗದ ಬಗ್ಗೆ ಆಸಕ್ತಿ ಇಲ್ಲ. ಆದರೆ ಕರಾವಳಿಯಲ್ಲಿ ಹೊಸ ಆರೋಗ್ಯಕರ ದೋಸೆ ಯಾಗಿ ಗುಜ್ಜೆ ದೋಸೆ ಯನ್ನು ಜನಪ್ರಿಯಗೊಳಿಸ ಬಹುದು. ಈ ಬಾರಿಯ ಗುಜ್ಜೆ ಸೀಸನ್‌ನಲ್ಲಿ ಈ ಒಲವು ಹೆಚ್ಚಾಗಲಿದೆ ಎನ್ನುತ್ತಾರೆ ಶ್ರೀ ಪಡ್ರೆ.

Advertisement

ಸರಳ ವಿಧಾನ
ನೆನೆಹಾಕಿದ ಅಕ್ಕಿ ಶೇ.50, ತಾಜಾ ಗುಜ್ಜೆ ತೆಗೆದು, ಅದನ್ನೂ ಶೇ. 50ರಷ್ಟು ಹಾಕಿ, ರುಚಿಗೆ ಉಪ್ಪು ಸೇರಿಸಿ. ಉದ್ದು ಅಗತ್ಯವಿಲ್ಲ. ಆಸಕ್ತರು ತಮ್ಮಿಷ್ಟದ ಮಸಾಲೆ ಬೇಕಾದರೆ ಸೇರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next