Advertisement

ನಡಾಲ್‌-ಥೀಮ್‌: ಯಾರದು ಗೆಲುವಿನ ಗೇಮ್‌?

11:26 AM Jun 10, 2018 | Harsha Rao |

ಪ್ಯಾರಿಸ್‌: ರಫೆಲ್‌ ನಡಾಲ್‌ ಅವರ 11ನೇ ಫ್ರೆಂಚ್‌ ಓಪನ್‌ ಪ್ರಶಸ್ತಿಗೆ ಇನ್ನೊಂದೇ ಮೆಟ್ಟಿಲು. ಎಲ್ಲ ಲೆಕ್ಕಾಚಾರಗಳು ನಿಜವಾದರೆ ನಡಾಲ್‌ ರವಿವಾರ ರಾತ್ರಿ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಹೊಳೆಯುವ ಟ್ರೋಫಿಯನ್ನು ಕಚ್ಚಿ ಹಿಡಿಯುವುದು ಖಚಿತ!

Advertisement

ಆದರೆ ಎದುರಾಳಿ, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ. ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಥೀಮ್‌ ಪಾಲಿನ ಹೆಗ್ಗಳಿಕೆಯೆಂದರೆ, ಕಳೆದೆರಡು ವರ್ಷಗಳ ಕ್ಲೇ ಕೋರ್ಟ್‌ ಟೆನಿಸ್‌ ಟೂರ್ನಿಯಲ್ಲಿ ನಡಾಲ್‌ ಅವರನ್ನು 2 ಸಲ ಸೋಲಿಸಿದ ವಿಶ್ವದ ಏಕಮಾತ್ರ ಟೆನಿಸಿಗನೆಂಬುದು! ಈ ವರ್ಷ ಮ್ಯಾಡ್ರಿಡ್‌ನ‌ಲ್ಲಿ, ಕಳೆದ ವರ್ಷ ರೋಮ್‌ನಲ್ಲಿ ಅವರು ನಡಾಲ್‌ಗೆ ಆಘಾತವಿಕ್ಕಿದ್ದರು. ನಡಾಲ್‌ ವಿರುದ್ಧ ಥೀಮ್‌ ಅವರ ಈ ಕ್ಲೇ ಕೋರ್ಟ್‌ ಗೆಲುವು ಮೂರಕ್ಕೇಕೆ ಏರಬಾರದು? ಗ್ರ್ಯಾನ್‌ಸ್ಲಾಮ್‌ಗಳಲ್ಲೂ ಆಗಾಗ ಅಚ್ಚರಿ ಸಂಭವಿಸುವುದುಂಟು!

“ಇಲ್ಲಿನ ವಾತಾವರಣವನ್ನು ನಡಾಲ್‌ ಚೆನ್ನಾಗಿ ಬಲ್ಲರು. ಅಕಸ್ಮಾತ್‌ ಈ ಸ್ಪರ್ಧೆ 5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟರೆ ಅದರ ಕತೆಯೇ ಬೇರೆಯಾಗಬಹುದು’ ಎಂದಿರುವ 24ರ ಹರೆಯದ ಡೊಮಿನಿಕ್‌ ಥೀಮ್‌, “ನನ್ನಲ್ಲೊಂದು ಪ್ಲ್ರಾನ್‌ ಇದೆ’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

1995ರ ಬಳಿಕ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಆಸ್ಟ್ರಿಯಾದ ಮೊದಲ ಟೆನಿಸಿಗನೆಂಬ ಹೆಗ್ಗಳಿಕೆ ಥೀಮ್‌ ಅವರದು. ಅಂದು ಆಸ್ಟ್ರಿಯಾದ ಥಾಮಸ್‌ ಮಸ್ಟರ್‌ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು. 

 24ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ 
32ರ ಹರೆಯದ ಸ್ಪೇನ್‌ ಟೆನಿಸಿಗ ರಫೆಲ್‌ ನಡಾಲ್‌ ಅವರ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ಳ ಅನುಭವ ಅಪಾರ. ಇದು 24ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಈಗಾಗಲೇ 16 ಸಲ ಚಾಂಪಿಯನ್‌ ಆಗಿದ್ದಾರೆ. ಇದರಲ್ಲಿ ಫ್ರೆಂಚ್‌ ಓಪನ್‌ನದ್ದೇ ಸಿಂಹಪಾಲು. ರವಿವಾರ ಗೆದ್ದರೆ ಒಂದೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಅತೀ ಹೆಚ್ಚು 11 ಸಲ ಗೆದ್ದ ಆಸ್ಟ್ರೇಲಿಯನ್‌ ಆಟಗಾರ್ತಿ ಮಾರ್ಗರೆಟ್‌ ಕೋರ್ಟ್‌ ಅವರ ದಾಖಲೆಯನ್ನು ನಡಾಲ್‌ ಸರಿದೂಗಿಸಲಿದ್ದಾರೆ. ಕೋರ್ಟ್‌ 1960-73ರ ಅವಧಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಮೇಲೆ 11 ಸಲ ಹಕ್ಕು ಚಲಾಯಿಸಿದ್ದರು.

Advertisement

ಥೀಮ್‌ಗೆ ಗೆಲುವು ಕಷ್ಟ
ಸೆಮಿಫೈನಲ್‌ನಲ್ಲಿ ರಫೆಲ್‌ ನಡಾಲ್‌ ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು ಪರಾಭವಗೊಳಿಸಿದ್ದರು. “ನಡಾಲ್‌ ಹೆಚ್ಚು ಬಲಿಷ್ಠರಾಗಿದ್ದಾರೆ. ಅವರನ್ನು ಮಣಿಸಿ ಇತಿಹಾಸ ನಿರ್ಮಿಸುವುದು ಸುಲಭ ವಲ್ಲ’ ಎಂದು ಥೀಮ್‌ಗೆ ಎಚ್ಚರಿಕೆ ನೀಡಿದ್ದಾರೆ ಡೆಲ್‌ ಪೊಟ್ರೊ.

ಪ್ಯಾರಿಸ್‌: ನಡಾಲ್‌ ಕಠಿನ ಎದುರಾಳಿ
 ನಾನು ನಡಾಲ್‌ ಅವರನ್ನು ಸೋಲಿಸಲೇಬೇಕಾದರೆ ರೋಮ್‌ ಮತ್ತು ಮ್ಯಾಡ್ರಿಡ್‌ನ‌ಲ್ಲಿ ಪ್ರದರ್ಶಿಸಿದಂಥ ಆಟವನ್ನೇ ಪುನರಾವರ್ತಿಸಬೇಕು. ಆದರೆ ಪ್ಯಾರಿಸ್‌ನಲ್ಲಿ ಅವರು ಯಾವತ್ತೂ ಕಠಿನ ಎದುರಾಳಿ ಎಂಬ ಅರಿವು ನನಗಿದೆ.            – ಡೊಮಿನಿಕ್‌ ಥೀಮ್‌ 

ಅವಕಾಶ ಸಿಕ್ಕಿದಾಗ ಬಾಚಿಕೊಳ್ಳಬೇಕು
ಫ್ರೆಂಚ್‌ ಓಪನ್‌ನಲ್ಲಿ ಆಡುವುದೇ ನನ್ನ ಪಾಲಿಗೊಂದು ವಿಶೇಷ ಪ್ರೇರಣೆ. ಇದು ಸದಾ ಎತ್ತರದಲ್ಲಿರುತ್ತದೆ. ಗಾಯಾಳಾಗಿ ಇಲ್ಲಿ ಆಡುವ ಅನೇಕ ಅವಕಾಶಗಳನ್ನು ನಾನು ಕಳೆದುಕೊಂಡೆ. ಇಲ್ಲಿ ಇನ್ನೂ 10 ಪ್ರಶಸ್ತಿಗಳಿಗಾಗುವಷ್ಟು ಆಟ ನನ್ನಲ್ಲಿ ಉಳಿದಿಲ್ಲ. ಹೀಗಾಗಿ ಅವಕಾಶ ಸಿಕ್ಕಿದಾಗ ಇದನ್ನು ಬಾಚಿಕೊಳ್ಳಬೇಕು ಎಂಬ ಸಿದ್ಧಾಂತ ನನ್ನದು. 
-ರಫೆಲ್‌ ನಡಾಲ್‌

Advertisement

Udayavani is now on Telegram. Click here to join our channel and stay updated with the latest news.

Next