ದಿನದಲ್ಲಿ ಒಂದು ಬಾರಿ ಸ್ವಲ್ಪ ಬಿಸಿಲು ಹೆಚ್ಚಾದರೂ ನಮಗೆ ಸಹಿಸಲು ಸಾಧ್ಯ ವಾಗುವುದಿಲ್ಲ. ದಿವಸಕ್ಕೊಮ್ಮೆ 6-7 ಬಾರಿಯಾದರೂ ನೀರು ಕುಡಿಯುತ್ತಲೇ ಇರಬೇಕಾಗುತ್ತದೆ. ಸರಿಯಾದ ನೀರು, ಸೂರು ಇರದಿದ್ದರೆ ಆ ವ್ಯಕ್ತಿ ಒಂದೇ ದಿನಕ್ಕೆ ಸುಸ್ತಾಗುತ್ತಾನೆ. ನಾವೇನೋ ಬಿಸಿಲು ಎಂದು ದೊಡ್ಡದಾಗಿ ಮನೆ ಕಟ್ಟಿಕೊಂಡು ಅದರೊಳಗೆ ನೆಲೆಸುತ್ತೇವೆ. ಕುಡಿಯುವ ನೀರಿಗಾಗಿ ಬಾವಿ, ಬೋರ್ ವೆಲ್ ಗಳನ್ನೋ ಮಾಡಿಕೊಳ್ಳುತ್ತೇವೆ. ಆದರೆ ನಾವಿರುವ ಪ್ರದೇಶಗಳಲ್ಲಿ ಬಿಸಿಲು ಮರುಭೂಮಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ, ನೀರು ಅಧಿಕವಾಗಿಯೇ ಇದೆ. ಬೇಕೆ ಬೇಕು ಎಂದಾಗ ಲಭಿಸುವಂತೆ ಕೈಗೆಟಕುವಂತೆ ನಮಗೆ ಅಗತ್ಯ ವಸ್ತುಗಳೂ ಲಭಿಸುತ್ತದೆ. ಆದರೆ ಮರುಭೂಮಿಯಲ್ಲಿರುವ ವ್ಯಕ್ತಿಯೋ…? ಅಲ್ಲಿ ಜೀವಿಸುವ ಜೀವಿಗಳಿಗೋ…?
ಮರುಭೂಮಿಯಲ್ಲಿ ಸಂಚರಿಸುವ ವ್ಯಕ್ತಿ ಒಂಟೆ ಮೇಲೆ ಸವಾರಿ ಮಾಡಿದರೂ, ತನ್ನ ಕಾಲಲ್ಲೇ ನಡೆದಾಡಿದರೂ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ದಾರಿ ಖರ್ಚಿಗೆಂದು ತನ್ನೊಡನೇ ಇಟ್ಟುಕೊಳ್ಳುತ್ತಾನೆ. ಸೂರ್ಯನ ಶಾಖವನ್ನು ತಡೆಯಲು ತನಗೆ ಬೇಕಾದಲ್ಲಿ ಟೆಂಟ್ ಗಳನ್ನು ಹಾಕಿಕೊಳ್ಳುತ್ತಾನೆ. ಆದರೆ ಮರುಭೂಮಿಯಲ್ಲಿ ವಾಸಿಸುವ ಪ್ರಾಣಿಗಳು ಹೇಗೆ ವರ್ಷವಿಡೀ ಆ ಸುಡುಬಿಸಿಲ ಶಾಖವನ್ನು ಸಹಿಸಿಕೊಂಡು ಅಲ್ಲಿಯೇ ನೆಲೆಸಿವೆ? ಅವುಗಳಿಗೆ ರಾತ್ರಿ ಹೊತ್ತಲ್ಲಿ ಕೊರೆಯುವ ಚಳಿಯಲ್ಲಿ ನಡುಕವುಂಟಾಗುವುದಿಲ್ಲವೇ?
ಪ್ರಾಣಿಗಳು ಚಳಿ ಮತ್ತು ಸೆಕೆಯನ್ನು ಹೇಗೆ ಸಮವಾಗಿ ಸಂಭಾಳಿಸುತ್ತವೆ? ಅಷ್ಟಕ್ಕೂ ಅಲ್ಲಿ ನೆಲೆಸುವ ಪ್ರಾಣಿಗಳಾದರೂ ಯಾವುವು? ಅವುಗಳಿಗೆ ಬೇಕಾದ ಆಹಾರವಾದರೂ ಹೇಗೆ, ಎಲ್ಲಿಂದ ಲಭಿಸುತ್ತದೆ? ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನು ಮಾಡುತ್ತವೆ? ಎಂಬೆಲ್ಲಾ ಪ್ರಶ್ನೆಗಳು ಯಾರ ಮನಸಲ್ಲೆಲ್ಲಾ ಮೂಡಿದೆ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಇಲ್ಲಿದೆ.
ಮರುಭೂಮಿಯಲ್ಲಿ ಹಲವು ಪ್ರಾಣಿಗಳು ಜೀವಿಸುತ್ತವೆ. ಇವುಗಳು ಸಾಮಾನ್ಯ ಜೀವಿಗಳಿಗಿಂತ ವಿಶಿಷ್ಟವಾಗಿದೆ. ಅವುಗಳ ದೇಹ ಪ್ರಕೃತಿಯು ಅಲ್ಲಿನ ವಾತಾವರಣಕ್ಕೆ ಬೇಕಾದಂತೆ ಹೊಂದಿಕೊಂಡಿರುತ್ತದೆ. ಜೊತೆಗೆ ಅವುಗಳು ಮರುಭೂಮಿಯ ಸುಡುಬಿಸಿಲಿಗೆ ಹಾಗೂ ಮರಗಟ್ಟುವ ಚಳಿಯಲ್ಲಿ ಹೇಗೆ ಜೀವಿಸಬೇಕೆಂಬ ದಾರಿ ಕೂಡ ಕಂಡುಕೊಂಡಿರುತ್ತದೆ. ಮರುಭೂಮಿಯಲ್ಲಿ ಒಂಟೆ, ಚೇಳು, ಜೇಡ, ಹಾವು, ಮೀರ್ಕಟ್, ಮರುಭೂಮಿ ಮುಳ್ಳುಹಂದಿ, ಜೆರ್ಬೋವಾ, ಅರೇಬಿಯನ್ ಓರಿಕ್ಸ್, ಮರುಭೂಮಿ ಆಮೆ, ಮರುಭೂಮಿ ಬೆಕ್ಕು, ಗಿಲ ಮೋನ್‌ಸ್ಟರ್, ಸ್ಯಾಂಡ್ ಫಿಶ್, ಫೆನೆಕ್ ಫಾಕ್ಸ್, ರೋಡ್ ರನ್ನರ್ ಹೀಗೆ ಹಲವಾರು ಪ್ರಾಣಿಗಳು ವಾಸಿಸುತ್ತವೆ.
ಈ ಪ್ರಾಣಿಗಳಲ್ಲಿದೆ ನೀರು ಸಂಗ್ರಹಿಸುವ ಸಾಮರ್ಥ್ಯ:
ಇಂತಹ ಸ್ಥಳಗಳಲ್ಲಿ ಜೀವಿಸುವ ಪ್ರಾಣಿಗಳು ಹಗಲು ಹೊತ್ತಿನಲ್ಲಿ ಸೂರ್ಯನ ಶಾಖದಿಂದ ರಕ್ಷಣೆ ಪಡೆದುಕೊಳ್ಳಲು ನೆರಳಿಗಾಗಿ ಬಿಲಗಳ ಅಗೆದು ಅದರೊಳಗೆ ವಾಸಿಸುತ್ತವೆ. ಇವುಗಳು ಹಗಲಿನ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಿಸಿಲು ಕಡಿಮೆಯಾದ ಮೇಲೆ ರಾತ್ರಿಯ ತಂಪು ಹೊತ್ತಲ್ಲಿ ಬಹಳಷ್ಟು ಸಕ್ರಿಯವಾಗಿರುತ್ತದೆ. ಇದೇ ಸಮಯದಲ್ಲಿ ತನ್ನ ಆಹಾರ ಹುಡುಕುತ್ತವೆ. ಇಲ್ಲಿ ವಾಸಿಸುವ ಪ್ರಾಣಿಗಳ ದೇಹ ಪ್ರಕೃತಿಯು ನೀರು ಹಿಡಿದಿಟ್ಟುಕೊಳ್ಳುವಲ್ಲಿ ಬಹಳಷ್ಟು ಸಹಕಾರಿಯಾಗಿದೆ. ಅದು ಅಲ್ಲದೆ ಅವುಗಳು ಸೇವಿಸುವ ಆಹಾರದಿಂದ ಬಹಳಷ್ಟು ನೀರಿನ ಅಂಶ ದೇಹ ಸೇರುವುದರಿಂದ ಪದೇ ಪದೇ ನೀರು ಕುಡಿಯಬೇಕೆಂದಿಲ್ಲ.
ಪ್ರಾಣಿಗಳ ದೇಹ ಸಂರಚನೆಯೇ ವಿಶಿಷ್ಟ:
ಕೆಲವು ಪ್ರಾಣಿಗಳಿಗೆ ಬಿಸಿಲಿನ ಶಾಖ ತಡೆದುಕೊಳ್ಳಲು ಉದ್ದವಾದ ಅಥವಾ ಅಗಲವಾದ ಕಿವಿಗಳು, ದೊಡ್ಡ ಗಾತ್ರದ ಪಂಜಗಳಂತಹ ದೇಹ ಲಕ್ಷಣಗಳನ್ನು ಹೊಂದಿವೆ. ಜತೆಗೆ ಅವುಗಳ ದೇಹದಲ್ಲಿನ ದಪ್ಪ ರೋಮಗಳು ಅವುಗಳನ್ನು ಅತಿಯಾದ ಬಿಸಿಲು ಹಾಗೂ ಚಳಿಯಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ.
ಸಾಧಾರಣ ಪರಿಸರದಲ್ಲಿ ವಾಸಿಸುವುದಕ್ಕೂ ಮರುಭೂಮಿಯಲ್ಲಿ ವಾಸಿಸುವುದಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ. ಅದು ಪ್ರಾಣಿಗಳಿಗೇ ಆಗಲೀ ಮನುಷ್ಯರಿಗೇ ಆಗಲಿ. ಆಯಾ ಪ್ರದೇಶಗಳಿಗೆ ಹೊಂದುವಂತೆ, ಜೀವಿಸಲು ಸಹಕಾರಿಯಾಗುವಂತೆ ಪ್ರಾಣಿಗಳ ದೇಹವು ನಿರ್ಮಿತವಾಗಿದೆ. ಒಂದು ಕಡೆ ನೀರು, ನೆರಳಿಲ್ಲದೇ ಬದುಕಲೇ ಅಸಾಧ್ಯ ಎನ್ನುವಂತಹ ಜೀವಿಗಳಿದ್ದರೆ ಇನ್ನೊಂದೆಡೆ ಸರಿಯಾಗಿ ನೀರು, ನೆರಳಿನ ಅಗತ್ಯವಿಲ್ಲದೇ ಬದುಕುವ ಪ್ರಾಣಿಗಳು ಜಗತ್ತಿನಲ್ಲಿರುವುದೇ ವಿಶೇಷ.
-ಪೂರ್ಣಶ್ರೀ.ಕೆ