Advertisement
ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆಯ ಅಗೇಲು, ತಂಬಿಲಾದಿಗಳು ಮೇ 24ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿ ಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಿಗೆ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ. ಈ ದಿನ ಗುಳಿಗ, ಭೈರವ ದೈವಗಳಿಗೆ ಭಕ್ತರು ಮಾಡಿ ಪ್ರಾರ್ಥಿಸುತ್ತಾರೆ, ಹರಕೆ ಒಪ್ಪಿಸುತ್ತಾರೆ. ಹತ್ತನಾವಧಿಯವರೆಗೆ ಭೂತ ಕೋಲಗಳು ನಡೆದು ಗೆಜ್ಜೆ ಬಿಚ್ಚುವ ನಂಬಿಕೆ ಇದ್ದು, ಹತ್ತನಾವಧಿಯವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವೆಂದು ಪರಿಗಣಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿರಳವಾಗಿರುವ ನಾಟಿ ಕೋಳಿ ಸಾಕುವವರಲ್ಲಿ ನಾಟಿ ಕೋಳಿ ಖರೀದಿಸಲು ಎಲ್ಲ ಸಮಯದಲ್ಲೂ ಬೇಡಿಕೆ ಇದ್ದರೂ ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಹತ್ತನಾವಧಿಯ ಸಂದರ್ಭದಲ್ಲಿ ನಾಟಿ ಕೋಳಿ ಸಾಕಾಣೆದಾರರು ಹೇಳಿದ ಬೆಲೆ ಲಭಿಸುತ್ತದೆ. ಆದರೆ ಅಂಕದ ಕೋಳಿಗಳಿಗೆ ಕೆ.ಜಿ. ಲೆಕ್ಕದ ದರ ಲಗಾವಾಗುವುದಿಲ್ಲ, ಕೋಳಿಯ ಜಾತಿ, ಸಾಮರ್ಥ್ಯವನ್ನು ಅವಲಂಬಿಸಿ ಒಂದರಿಂದ 10 ಸಾವಿರ ರೂ. ತನಕವೂ ಬೆಲೆ ಬಾಳುತ್ತದೆ. ಬೇಡಿಕೆಯನ್ನು ಆಧರಿಸಿ ಬ್ರಾಯ್ಲರ್, ಟೈಸನ್ ಕೋಳಿಗಳಂತೆ ನಾಟಿ ಕೋಳಿ ಮಾರಾಟದ ಫಾರಂಗಳೂ ಹುಟ್ಟಿ ಕೊಂಡಿವೆ. ಪುತ್ತೂರಿನ ಪಡೀಲ್‌ನಲ್ಲಿ ಇಂತಹ ಎರಡುಫಾರಂಗಳಿವೆ. ಸೀಸನ್ ಅವಧಿಗೆ ನಾಟಿ ಕೋಳಿ ಫಾರಂನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇಲ್ಲಿನ ಎರಡು ಅಂಗಡಿಗಳಲ್ಲಿ ಸುಮಾರು 20 ಕ್ವಿಂಟಲ್ ನಾಟಿ ಕೋಳಿಗಳು ಒಂದೇ ವಾರದಲ್ಲಿ ಮಾರಾಟವಾಗುತ್ತವೆ. ಈ ಕೋಳಿಗಳನ್ನು ತಮಿಳುನಾಡಿನಿಂದ ತರಿಸಲಾಗುತ್ತದೆ. ಇವು ಜಾಸ್ತಿ ತೂಕ ಇರುತ್ತವೆ. ಇವುಗಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಮೈಸೂರು, ಮಂಡ್ಯಗಳಿಂದ ಆಮದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ.
Related Articles
ಪ್ರಸ್ತುತ ಸಾದಾ ಊರಿನ ಕೋಳಿ ಕೆ.ಜಿ. ಯೊಂದರ 400 ರೂ.ಗೆ ಮಾರಾಟವಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮೇ 23, 24ರಂದು ಈ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾ ಗುವ ಹೈಬ್ರಿಡ್ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 200ರಿಂದ 300 ರೂ. ತನಕ ಮಾರಾಟವಾಗುತ್ತಿದೆ.
Advertisement
ರಾಜೇಶ್ ಪಟ್ಟೆ