Advertisement
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ರವಿಕುಮಾರ್, ಸಿ.ಟಿ. ರವಿ, ಡಿ.ಎಸ್. ಅರುಣ್, ಸರಕಾರ ಒಂದು ಕಡೆ ಗೃಹಲಕ್ಷ್ಮೀ ಯೋಜನೆಯನ್ನು ನೀಡುತ್ತಾ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ, ಸರಕಾರದ ಜಿಲ್ಲಾಸ್ಪತ್ರೆಯನ್ನು ನಂಬಿ ಚಿಕಿತ್ಸೆಗೆ ಹೋಗುತ್ತಿರುವ ಗೃಹಿಣಿಯರು ಮನೆಗೆ ಮರಳಿ ಹೋಗುತ್ತೇವೋ? ಇಲ್ಲವೋ? ಎಂಬ ಜೀವ ಭಯದಲ್ಲಿದ್ದಾರೆ ಎಂದು ಆರೋಪಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಧುನಿಕ ಯಂತ್ರೋಪಕಣಗಳ ಕಾಲದಲ್ಲಿ ಕೂಡ ಆಸ್ಪತ್ರೆಗಳಲ್ಲಿ ಬಾಣಂತಿಯರು ಜೀವ ಕೈಚಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ. ರಾಜ್ಯದಲ್ಲಿ ಸರಕಾರಿ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿದೆ. ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ. ಕಳಪೆ ಗ್ಲೂಕೋಸ್, ಔಷಧಿಗಳಿಂದ ಗೃಹಲಕ್ಷ್ಮಿಯರು ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು. ಈ ವೇಳೆ ಮಧ್ಯಪ್ರವೇಶಿ ಸಿ ದ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ವಿಚಾರವಾಗಿ ಸರಕಾರ ಚರ್ಚೆ ನಡೆಸಲು ಸಿದ್ಧವಿದೆ ಎಂದರು. ಈ ವೇಳೆ ಸಭಾಪತಿ ಹೊರಟ್ಟಿ ಶೂನ್ಯ ವೇಳೆ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ. ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.