Advertisement

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

03:52 AM Dec 30, 2024 | Team Udayavani |

ಸಮುದ್ರ ಹಲವಾರು ಕೌತುಕಗಳ ಆಗರವಷ್ಟೇ ಅಲ್ಲ; ಜತೆಜತೆಗೆ ಅಪಾರ ಸಂಪತ್ತಿನ ಖಜಾನೆಯೂ ಹೌದು. ಮತ್ಸ್ಯ ಸಂಪತ್ತಿನಿಂದ ಮೊದಲ್ಗೊಂಡು ಮುತ್ತು, ಹವಳಗಳೂ ಇಲ್ಲಿ ಲಭ್ಯ. ಮರಳಿನ ಕಣ ಚಿಪ್ಪಿನ ಮಾಂಸದಲ್ಲಿ ಸಿಲುಕಿಕೊಂಡಾಗ ಅಸಾಧ್ಯ ನೋವು ಉಂಟಾಗುತ್ತದೆ. ಆಗ ಚಿಪ್ಪು ಸ್ರವಿಸುವ ಮಂದ ದ್ರವದಿಂದಲೇ ಮುತ್ತು ರೂಪುಗೊಳ್ಳುವುದೆಂದು ನಮಗೆ ತಿಳಿದೇ ಇದೆ.

Advertisement

ಈಗ ಮುತ್ತಿನ ಕೃಷಿ ಎಂಬ ಹೆಸರಿನಲ್ಲಿ ಮನುಷ್ಯನೇ ಚಿಪ್ಪಿನ ಮಾಂಸಕ್ಕೆ ಮರಳು ಸೇರಿಸಿ ಮುತ್ತನ್ನು ಪಡೆಯುತ್ತಾನೆ. ಇಂತಹದ್ದೇ ಇನ್ನೊಂದು ವಿಸ್ಮಯಕಾರಿ ವಸ್ತುವಿದೆ; ಅದೇ ಅಂಬರ್‌ ಗ್ರೀಸ್‌ ಅಥವಾ ತಿಮಿಂಗಿಲದ ವಾಂತಿ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ ರೂಪುಗೊಳ್ಳುವುದರ ಹಿಂದೆ ಮುತ್ತಿನಷ್ಟೇ ರೋಚಕ ಕಥೆಯಿದೆ. ಅಂಬರ್‌ ಗ್ರೀಸ್‌ನ ಬಗೆಗೆ ಮಾನವನ ಸ್ವಾರ್ಥದ ನಡೆ ನೋಡಿದಾಗ ಅಂಬರ್‌ ಗ್ರೀಸ್‌ನ ಹಿಂದೆ ವ್ಯಥೆಯೂ ಇದೆ ಅನ್ನಿಸದಿರದು. ಹಾಗಾದರೆ ಅಂಬರ್‌ ಗ್ರೀಸ್‌ ಅಥವಾ ತಿಮಿಂಗಿಲದ ವಾಂತಿ ಅಂದರೇನು? ಸಮುದ್ರಕ್ಕೂ ಇದಕ್ಕೂ ಏನಾದರೂ ಸಂಬಂಧ ಇದೆಯೇ? ಮನುಷ್ಯ ಏತಕ್ಕಾಗಿ ಅಂಬರ್‌ ಗ್ರೀಸ್‌ನ ಹಿಂದೆ ಬಿದ್ದು ಕಂಬಿ ಎಣಿಸುತ್ತಿದ್ದಾನೆ ಎಂಬುದನ್ನು ತಿಳಿಯೋಣ.

ಸಮುದ್ರವೆಂದ ಕೂಡಲೇ ಭೂಮಿಯ ಮೇಲಿನ ಅತೀ ದೊಡ್ಡ ಜೀವಿ, ಆಫ್ರಿಕಾ ಆನೆಗಳಿಗಿಂತಲೂ ದೊಡ್ಡದಾದ ತಿಮಿಂಗಿಲಗಳು ನಮ್ಮ ಕಣ್ಣೆದುರಿಗೆ ಬರುತ್ತವೆ. ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ತಿಮಿಂಗಿಲದ ಕೊಬ್ಬಿಗಾಗಿ ಮಾಡ ಲಾಗುತ್ತಿರುವ ಮಾರಣಹೋಮ ಗುಟ್ಟಾಗಿ ಉಳಿದಿಲ್ಲ. ಇದೀಗ ತಿಮಿಂಗಿಲದ ವಾಂತಿಗೂ ಬೆಲೆ ಬಂದಿದೆಯೆಂದರೆ ನಂಬಲೇಬೇಕು. ಹೌದು, ಸ್ಟರ್ಮ್ ವೇಲ…(ವೀರ್ಯ ತಿಮಿಂಗಿಲ) ಎಂಬ ಪ್ರಭೇದದ ತಿಮಿಂಗಿಲವೊಂದಿದೆ. 35 ರಿಂದ 60 ಅಡಿಯ ವರೆಗೆ ಉದ್ದವಿರುತ್ತದೆ; 40,000 ಕೆ.ಜಿ.ವರೆಗೆ ತೂಗುತ್ತದೆ. ಅದರ ವಿಶೇಷತೆಯೆಂದರೆ ಈ ತಿಮಿಂಗಿಲದ ತಲೆ ದೊಡ್ಡದು. ಭೂಮಿಯ ಮೇಲೆ ಅತೀ ದೊಡ್ಡ ಮೆದುಳನ್ನು ಹೊಂದಿದ ಜೀವಿಯೆಂದು ಹೆಸರು ಪಡೆದಿದೆ. ದೊಡ್ಡದಾದ ತಲೆಯ ಭಾಗದಲ್ಲಿ ದೊಡ್ಡ ಪ್ರಮಾಣ ದಲ್ಲಿಯೇ ಮೇಣದಂತಹ ಪದಾರ್ಥ ಸಂಗ್ರಹಗೊಳ್ಳುತ್ತದೆ.

ನೂರಾರು ವರ್ಷಗಳ ಹಿಂದಿನಿಂದಲೂ ದೀಪ ಉರಿಸುವ ತೈಲಕ್ಕಾಗಿ ಇದನ್ನು ಅವ್ಯಾಹತವಾಗಿ ಕೊಲ್ಲಲಾಗುತ್ತಿತ್ತು. ಈಗಲೂ ಮುಂದುವರಿದಿದೆ. ಇದರ ಹಲ್ಲುಗಳು ಬೇರೆ ಪ್ರಭೇದದ ತಿಮಿಂಗಿಲಗಳ ಹಲ್ಲುಗಳಿಗಿಂತ ದೊಡ್ಡದಿರುತ್ತವೆ. ಆದರೆ ಸಿಕ್ಕ ಆಹಾರವನ್ನು ಜಗಿಯದೆ, ನುಂಗುವಂತಹ ಹೊಟ್ಟೆ ಬಾಕ. ಒಮ್ಮೊಮ್ಮೆ ಕಪ್ಪೆ ಬೊಂಡಾಸ್‌(ಸ್ಕಿಡ್‌) ಮೀನನ್ನು ನುಂಗುತ್ತದೆ. ಅದರ ಬೆನ್ನಿನ ಭಾಗದಲ್ಲಿ ಆಧಾರವಾಗಿರುವ ಕ್ಯಾಲ್ಸಿಯಂನ ಗಟ್ಟಿಯಾದ ಮೂಳೆಯಂತಹ ಭಾಗ ಇದೆ.

ಸ್ಕಿಡ್‌ನ್ನು ಇಡಿಯಾಗಿ ನುಂಗಿದಾಗ ಅದರ ಕ್ಯಾಲ್ಸಿಯಂನ ಬೆನ್ನು ಮೂಳೆ ಅತ್ತ ಪಚನವೂ ಆಗದೆ, ಇತ್ತ ಉಗುಳಲೂ ಆಗದೆ ಕರುಳಿನಲ್ಲಿಯೇ ಉಳಿದು ಬಿಡುತ್ತದೆ. ಆಗ ಆ ಗಟ್ಟಿಯಾದ ಆಹಾರ ತ್ಯಾಜ್ಯದ ಸುತ್ತಲೂ ಅದರ ದೇಹದಿಂದ ಮೇಣದಂತಹ ಮಂದ ದ್ರವವೊಂದು ರೂಪುಗೊಳ್ಳಲು ಪ್ರಾರಂಭವಾಗುತ್ತದೆ. ವರ್ಷಗಟ್ಟಲೆ ಅದರ ದೇಹದ ಒಳಗೆ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯಿಂದ ಅದು ಗಟ್ಟಿಯಾದ ಕಲ್ಲಿನಂತಹ ಆಕೃತಿ ಪಡೆಯುತ್ತದೆ.

Advertisement

ತಿಮಿಂಗಿಲಕ್ಕೆ ಬೇಡದ ವಸ್ತುವೊಂದು ದೇಹದೊಳಗಿಂದ ಹೊರಹೋದರೆ ಸಾಕೆಂದು ಬಿಡುತ್ತದೆ. ವಿಜ್ಞಾನಿಗಳ ಪ್ರಕಾರ ಹೀಗೆ ಸಂಗ್ರಹವಾದ ಅಂಬರ್‌ ಗ್ರೀಸ್‌ ತಿಮಿಂಗಿಲದ ಮರಣದೊಂದಿಗೆ ಹೊರ ಬರುತ್ತದೆ ಎಂದು. ಇನ್ನು ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ದೇಹದ ನಿರಂತರ ಹೊರತಳ್ಳುವಿಕೆಯ ಪರಿಣಾ ಮವಾಗಿ, ತಿಮಿಂಗಿಲದ ಬಾಯಿಯ ಮೂಲಕ ಅದು ಸಮು ದ್ರಕ್ಕೆ ವಿಸರ್ಜಿಸಲ್ಪಡುತ್ತದೆ ಎಂದು ಹೇಳುತ್ತಾರೆ.

ತಿಮಿಂಗಿಲಕ್ಕೆ ಬೇಡವಾದ, ಅಜೀರ್ಣವಾದ ಆ ವಸ್ತು ಯಾವಾಗ ಅದರ ದೇಹದಿಂದ ಹೊರ ಹಾಕಲ್ಪಡುತ್ತದೋ, ಆಗ ಅದು ಮನುಷ್ಯನಿಗೆ ಬೇಕಾದ ವಸ್ತುವಾಗಿ ಬಿಡುತ್ತದೆ. ಲಾಭವಿದೆ ಯೆಂದರೆ ವಾಂತಿಯಾದರೇನು? ಮಲವಾದರೇನು? ಮನುಷ್ಯನಿಗೆ ಯಾವ ಹೇಸಿಗೆಯೂ ಇರದು. ಆಳ ಸಮು ದ್ರದಲ್ಲಿ ಮೀನುಗಾರಿಕೆ ಮಾಡುವಾಗ ಒಮ್ಮೊಮ್ಮೆ ಅದು ಸಿಗುತ್ತದೆ. ಭಾರತದಲ್ಲಿ ಸ್ಟರ್ಮ್ ವೇಲ್‌ ಸಂರಕ್ಷಿತ ಜಲಚರವಾದ ಕಾರಣ, ಅದರಿಂದ ಸಿಗುವ ಈ ಉತ್ಪನ್ನವನ್ನು ಸರಕಾರಕ್ಕೆ ಒಪ್ಪಿಸಬೇಕು. ಆದರೆ ಮನುಷ್ಯ ಆಸೆಬುರುಕ. ಸಿಕ್ಕ ಕೂಡಲೆ, ಆತನ ತಲೆಯಲ್ಲಿ ಓಡುವ ಯೋಚನೆಯೊಂದೇ; ತಾನು ಅದನ್ನು ಮಾರಿ ಹೇಗೆ ಕೋಟ್ಯಧೀಶನಾಗಬೇಕು ಎಂದು.

ಇತ್ತೀಚೆಗೆ ಬೆಂಗಳೂರು, ಮಂಗಳೂರುಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನೂರು ಕೋ.ರೂ. ಬೆಲೆಯ ಅಂಬರ್‌ ಗ್ರೀಸನ್ನು ವಶಪಡಿಸಿಕೊಂಡಿ¨ªಾರೆ. ಚಿಕ್ಕಮಗಳೂರಿನ ಬೀರೂರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿ  ಜಿಲ್ಲೆಗಳಲ್ಲೂ ಇದರ ಕಳ್ಳಸಾ ಗಾಣಿಕೆ ಮಾಡುವವರನ್ನು ಪೊಲೀಸರು ಹಿಡಿದು ಹೆಡೆಮುರಿ ಕಟ್ಟಿದ್ದು ಶ್ಲಾಘನೀಯ. ಒಂದು ಕೆ.ಜಿ. ತೂಗುವ ಅಂಬರ್‌ ಗ್ರೀಸ್‌, ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿಗೆ ಬಿಕರಿ ಯಾಗುತ್ತದೆ. ತತ್‌ಕ್ಷಣ ಶ್ರೀಮಂತರಾಗುವ ಆಸೆಯಿಂದ ಮನುಷ್ಯ ತಿಮಿಂಗಿಲದ ವಾಂತಿಯ ಸಂಗ್ರಹದಲ್ಲಿ ತೊಡ ಗಿದ್ದಾನೆ. ವರ್ಷದ ಹಿಂದೆ ಮುರುಡೇಶ್ವರದಲ್ಲಿ ಜನಾರ್ದನ ಹರಿಕಾಂತ ಅವರಿಗೆ ಇಪ್ಪತ್ತೆçದು ಲಕ್ಷ ರೂಪಾಯಿ ಬೆಲೆಬಾಳುವ 250 ಗ್ರಾಂ ತೂಕದ ಅಂಬರ್‌ ಗ್ರೀಸ್‌ ಸಿಕ್ಕಿತ್ತು. ಅವರು ಅದನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದರು. ಇಂತಹ ಗುಣಗಳು ಎಷ್ಟು ಜನರಲ್ಲಿ ಕಾಣಸಿಗುತ್ತದೆ ನೀವೇ ಹೇಳಿ.

ಮೊನ್ನೆ ಮೊನ್ನೆ ಕುಂದಾಪುರದ ಕೋಡಿಯ ಕಡಲ ತೀರದಲ್ಲಿ ಅರಣ್ಯ ಸಂಚಾರಿ ದಳದ ತಂಡ ಮಾರುವೇಷದಲ್ಲಿ ಬಂದು ಅಂಬರ್‌ ಗ್ರೀಸ್‌ ವಶಪಡಿಸಿಕೊಳ್ಳಲು ದಾಳಿ ನಡೆಸಿದರು. 10ಕೆ.ಜಿ. ಯಷ್ಟು ಅಂಬರ್‌ ಗ್ರೀಸ್‌ ಇರುವ ಶಂಕೆಯಿಂದ ನಡೆದ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು. ಅವರಲ್ಲಿ ತಿಮಿಂಗಿಲದ ವಾಂತಿ ಇದೆಯೇ ಇಲ್ಲವೇ ಎಂಬುದು ಸದ್ಯ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ಮುಂದೊಂದು ದಿನ ಹಣದ ಆಸೆಗೆ ಇನ್ನೊಂದಿಷ್ಟು ಅಡ್ಡ ದಾರಿ ಹಿಡಿದು ಜಲಚರಗಳ ನಾಶಕ್ಕೆ ಕಾರಣನಾಗಬಹುದು ಎಂಬ ಉದ್ದೇಶದಿಂದ ಸರಕಾರವೂ ಇದನ್ನು ಸಾಗಿಸುವವರ ಮೇಲೆ ಹದ್ದಿನ ಕಣ್ಣಿರಿಸಿದೆ. ಸ್ಪರ್ಮ್ ತಿಮಿಂಗಿಲದ ದೇಹದಲ್ಲಿ ಅಂಬರ್‌ ಗ್ರೀಸ್‌ ಇರಬಹುದೆಂದು ಅಂದಾಜಿಸಿ, ಅದನ್ನು ಬೇಟೆಯಾಡುವವರೂ ಇದ್ದಾರೆ. ಮೊದಲೇ ತಿಮಿಂಗಿಲಗಳು ಅವನತಿಯ ಹಂತವನ್ನು ತಲುಪಿವೆ; ಅದರ ಜತೆಯಲ್ಲಿ ಮನು ಷ್ಯನೂ ಅವುಗಳ ನಾಶಕ್ಕೆ ನಿಂತುಕೊಂಡರೆ ಜಲಪರಿಸರದ ವಿಶೇಷ ಪ್ರಭೇದದ ಜೀವಿಯೊಂದು ಕಣ್ಮರೆಯಾ ಗಬಹು ದೆಂದು ಹೆಚ್ಚಿನ ದೇಶಗಳಲ್ಲಿ ಇವುಗಳ ಬೇಟೆಯನ್ನು ನಿಷೇಧಿ ಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಇದರ ಕಳ್ಳಸಾಗಾಣಿಕೆ ದಿನೇದಿನೆ ಹೆಚ್ಚಾಗುತ್ತಿದೆ. ಪರಿಣಾ ಮವಾಗಿ ಇದುವರೆಗೆ ನೂರಾರು ಮಂದಿ ಬಂಧಿಯಾಗಿದ್ದಾರೆ.

ಅಂಬರ್‌ ಗ್ರೀಸ್‌ ಯಾಕಿಷ್ಟು ಬೆಲೆಬಾಳುತ್ತದೆ ಎಂದು ನಿಮಗೆ ಅನ್ನಿಸಬಹುದು. ಇದು ವಿಶೇಷ ಪರಿಮಳ ಸೂಸುವ ವಸ್ತುವಾದ ಕಾರಣ ಇದನ್ನು ಸುಗಂಧದೆಣ್ಣೆ, ಅತ್ತರಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರಿಂದ ತಯಾರಿಸಿದ ಸುಗಂಧದ್ರವ್ಯ ಶ್ರೀಮಂತರನ್ನು ಹೆಚ್ಚು ಆಕರ್ಷಿಸುತ್ತದೆ. ಇದಲ್ಲದೆ ಕೆಲವು ಔಷಧಿಯ ತಯಾರಿಕೆಯಲ್ಲೂ; ಅಗರಬತ್ತಿ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ.

ಪ್ರಕೃತಿಯಲ್ಲಿ ಏನೇ ಸಿಕ್ಕರು ಮನುಷ್ಯರಿಗೆ ಉಪಯೋಗಕ್ಕೆ ಬರುತ್ತದೆ. ಆದರೆ ಮನುಷ್ಯ ತನ್ನ ಪಾಲಿಗೆ ಬಂದುದರಲ್ಲಿಯೇ ಸಂತೋಷ ಪಡುವುದಿಲ್ಲ. ಚಿನ್ನದ ಮೊಟ್ಟೆಯಿಡುವ ಕೋಳಿ ಯೆಂದು, ಒಂದೇ ಬಾರಿ ಕೊಯ್ದು ತಿನ್ನುವ ಆಸೆಬುರುಕನಂತೆ ಮನುಷ್ಯ ವರ್ತಿಸುತ್ತಾನೆ. ಕೊನೆಗೆ ತಾನೇ ಹೆಣೆದ ಬಲೆಯಲ್ಲಿ ತಾನೇ ಬಿದ್ದು ವಿಲವಿಲನೇ ಒದ್ದಾಡುತ್ತಾನೆ. ಸಮುದ್ರವೆಂಬ ಪರಿಸರ ಚಕ್ರದಲ್ಲಿ ತಿಮಿಂಗಿಲದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅರಿತಿದ್ದರೂ ಅವುಗಳ ನಾಶಕ್ಕೆ ಟೊಂಕ ಕಟ್ಟಿ ನಿಂತಿದ್ದಾನೆಂದರೆ ಆತನ ಅಜ್ಞಾನಕ್ಕೆ ಏನೆನ್ನಬೇಕು. ತಿಮಿಂಗಿಲಗಳು ನಾಶವಾದದಂತೆ ಮತ್ಸé ಕ್ಷಾಮದ ಜತೆಜತೆಗೆ ಮನುಷ್ಯನ ವಿನಾಶ ಎಂಬುದನ್ನು ಇನ್ನಾದರೂ ನಾವು ಅರಿಯಲೇಬೇಕು.

ನಾಗರಾಜ ಖಾರ್ವಿ, ಕಂಚುಗೋಡು

Advertisement

Udayavani is now on Telegram. Click here to join our channel and stay updated with the latest news.

Next