Advertisement

Myanmar: ಬಾಂಗ್ಲಾ ಗಡಿ ರೀತಿ ಮ್ಯಾನ್ಮಾರ್‌ಗೂ ಬೇಲಿ: ಅಮಿತ್‌ ಶಾ

08:56 PM Jan 20, 2024 | Pranav MS |

ಗುವಾಹಟಿ: ಬಾಂಗ್ಲಾದೇಶದ ಜತೆಗೆ ದೇಶ ಹೊಂದಿರುವ ಗಡಿಗೆ ಬೇಲಿ ಹಾಕಿ ರಕ್ಷಣೆ ಮಾಡಿಕೊಳ್ಳುತ್ತಿದೆ. ಅದೇ ಮಾದರಿಯನ್ನು ಮ್ಯಾನ್ಮಾರ್‌ ಗಡಿಯಲ್ಲೂ ಅನುಸರಿಸಿ, ಜನ ಸಂಚಾರ ನಿಯಂತ್ರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಗುವಾಹಟಿಯಲ್ಲಿ ಶನಿವಾರ ಅಸ್ಸಾಂ ರೈಫ‌ಲ್ಸ್‌ ಯೋಧರ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದರ ಜತೆಗೆ ಮ್ಯಾನ್ಮಾರ್‌ನಲ್ಲಿ ಸೇನಾಪಡೆ ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಮಿಜೋರಾಂಗೆ ಆ ದೇಶದ ನಾಗರಿಕರು ಪ್ರವೇಶಿಸುತ್ತಿರುವಂತೆಯೇ ಈ ಘೋಷಣೆ ಮಾಡಲಾಗಿದೆ.
ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ ಹಾಕುವ ಕೆಲಸವನ್ನು ಕೇಂದ್ರ ಕೈಗೆತ್ತಿಕೊಳ್ಳಲಿದೆ. ಬಾಂಗ್ಲಾದೇಶ ಗಡಿಯ ಜತೆಗೆ ಇರುವ ರೀತಿಯಲ್ಲಿಯೇ ಅದನ್ನು ನಿರ್ಮಿಸಲಾಗುತ್ತದೆ ಎಂದರು. ಮ್ಯಾನ್ಮಾರ್‌ ಜತೆಗೆ ನಿಯಂತ್ರಣ ಇಲ್ಲದೆ ಜನರ ಸಂಚಾರ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸಲಿದ್ದೇವೆ. ಹೀಗಾಗಿ, ಅಲ್ಲಿ ಬೇಲಿ ಹಾಕಿ ಗಡಿಯನ್ನು ಭದ್ರಪಡಿಸಲಾಗುತ್ತದೆ ಎಂದರು. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಈ ಕೆಲಸ ಪೂರ್ತಿಯಾಗಲಿದೆ ಎಂದರು.

600 ಮಂದಿ ಭಾರತ ಪ್ರವೇಶ:
ಇನ್ನೊಂದೆಡೆ, ಮಿಜೋರಾಂಗೆ ಹೊಂದಿಕೊಂಡಿರುವ ಮ್ಯಾನ್ಮಾರ್‌ ಗಡಿಯಲ್ಲಿ ಆ ದೇಶದ ಸೇನಾಪಡೆ ಮತ್ತು ಬಂಡುಕೋರರ ನಡುವೆ ಕಾಳಗ ಜೋರಾಗಿದೆ. ಹೀಗಾಗಿ, ಮ್ಯಾನ್ಮಾರ್‌ನ 600 ಮಂದಿ ಯೋಧರು ಮಿಜೋರಾಂ ಪ್ರವೇಶಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮುನ್ಸೂಚನೆ ನೀಡಿದೆ.

ಪೊಲೀಸರ ಹತ್ಯೆ ಹಿಂದೆ ಮ್ಯಾನ್ಮಾರ್‌ ಉಗ್ರರು?
ಜ.17ರಂದು ಮೊರೇ ಎಂಬ ಪಟ್ಟಣದಲ್ಲಿ ಇಬ್ಬರು ಪೊಲೀಸರ ಹತ್ಯೆ ಹಿಂದೆ ಮ್ಯಾನ್ಮಾರ್‌ನ ಬಂಡುಕೋರರು ಇರುವ ಸಾಧ್ಯತೆ ಇದೆ. ಈ ಬಗ್ಗೆ ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್‌ ಸಿಂಗ್‌ ಶಂಕಿಸಿದ್ದಾರೆ. ಬುಧವಾರದ ಘಟನೆಗೂ ಮುನ್ನ ಮ್ಯಾನ್ಮಾರ್‌ನ ಉಗ್ರರು ರಾಜ್ಯದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಸೂಚನೆ ಸಿಕ್ಕಿತ್ತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next