Advertisement

ಅಹಿಂದ ವರ್ಗಕ್ಕೆ ಸಂಸ್ಕೃತ ಮಂತ್ರ

06:00 AM Oct 08, 2017 | |

ಬೆಂಗಳೂರು: ಅಧಿಕಾರಕ್ಕೆ ಬಂದ ಆರಂಭದಿಂದಲೂ ಅಹಿಂದ ಮಂತ್ರ ಜಪಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಈಗ ಹೊಸದಾಗಿ ಅಹಿಂದ ವರ್ಗಕ್ಕೆ ಸಂಸ್ಕೃತ ವೇದ ಮಂತ್ರ ಹೇಳಿಕೊಡಲು ಮುಂದಾಗಿದೆ.

Advertisement

ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಸರ್ಕಾರದ ವತಿಯಿಂದಲೇ ಐದು ಸಂಸ್ಕೃತ ವೇದ ಪಾಠ ತೆರೆಯಲು ತೀರ್ಮಾನಿಸಲಾಗಿದೆ.

ಕೇವಲ ಮೇಲ್ಜಾತಿ ವರ್ಗಕ್ಕೆ ಸೀಮಿತವಾಗಿರುವ ಸಂಸ್ಕೃತ ವೇದಾಧ್ಯಯನವನ್ನು ದಲಿತ, ಹಿಂದುಳಿದ ವರ್ಗಕ್ಕೂ ಕಲಿಸುವ ಮೂಲಕ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಅವರನ್ನು ಅರ್ಚಕರನ್ನಾಗಿ ನೇಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಅತಿ ಹೆಚ್ಚು ಆದಾಯ ತರುತ್ತಿರುವ ಐದು ಪ್ರಮುಖ ದೇವಸ್ಥಾನಗಳಾದ ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಮಣ್ಯ, ಸವದತ್ತಿ ಎಲ್ಲಮ್ಮನ ದೇವಸ್ಥಾನ, ದೇವರಾಯನ ದುರ್ಗ ಹಾಗೂ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸಂಸ್ಕೃತ ವೇದಾಧ್ಯಯನ ಶಾಲೆಗಳನ್ನು ತೆರೆಯಲು ಧಾರ್ಮಿಕ ಪರಿಷತ್ತಿನಲ್ಲಿ ತೀರ್ಮಾನಿಸಲಾಗಿದೆ.

ಈ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ. ಪ್ರತಿ ಶಾಲೆಗೂ ಕನಿಷ್ಠ 25 ರಿಂದ 30 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಸಂಸ್ಕೃತ ಜ್ಞಾನ, ವಯೋಮಿತಿಯ ನಿರ್ಭಂದ, ಕೋರ್ಸ್‌ ಅವಧಿ ಹಾಗೂ ಪಾಠ ಶಾಲೆಗಳನ್ನು ತೆರೆಯಲು ಈ ದೇಗುಲಗಳಲ್ಲಿ ಇರುವ ಮೂಲ ಸೌಕರ್ಯ ಕಲ್ಪಿಸುವ ಕುರಿತಂತೆ ಈಗಿನಿಂದಲೇ ಕ್ರಮ ತೆಗೆದುಕೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರಿ ಅರ್ಚಕರಿಗೆ ಕೊರತೆ: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,543 ದೇವಸ್ಥಾನಗಳಿದ್ದು, ಅವುಗಳಲ್ಲಿ ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚು ಆದಾಯ ತರುವ 160 ದೇವಸ್ಥಾನಗಳನ್ನು ಎ ಶ್ರೇಣಿಯ ದೇವಸ್ಥಾನಗಳೆಂದು ಗುರುತಿಸಲಾಗಿದೆ. 5 ಲಕ್ಷದಿಂದ 25 ಲಕ್ಷದ ವರೆಗೆ ಆದಾಯ ತರುವ 154 ದೇವಸ್ಥಾನಗಳನ್ನು ಬಿ ಶ್ರೇಣಿಯ ದೇವಸ್ಥಾನಗಳೆಂದು ಗುರುತಿಸಲಾಗಿದೆ. ಹಾಗೆಯೇ ಐದು ಲಕ್ಷಕ್ಕಿಂತ ಕಡಿಮೆ ಆದಾಯ ತರುವ 34,229 ದೇವಸ್ಥಾನಗಳನ್ನು ಸಿ ದರ್ಜೆಯ ದೇವಸ್ಥಾನಗಳೆಂದು ವರ್ಗಿಕರಿಸಲಾಗಿದೆ.

Advertisement

ಆದರೆ, ಬಹುತೇಕ ಸಿ ದರ್ಜೆಯ ದೇವಸ್ಥಾನಗಳಿಗೆ ನೇಮಕಗೊಳ್ಳಲು ಅರ್ಚಕರು ಹಿಂದೇಟು ಹಾಕುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಸರ್ಕಾರಿ ದೇವಸ್ಥಾನಗಳಿಗೆ ಕೊರತೆಯಾಗುವ ಅರ್ಚಕರನ್ನು ಸರ್ಕಾರಿ ಸಂಸ್ಕೃತ ವೇದ ಪಾಠ ಶಾಲೆಗಳಲ್ಲಿಯೇ ತರಬೇತುಗೊಳಿಸಿ ನೇಮಕ ಮಾಡಿಕೊಳ್ಳುವ ಲೆಕ್ಕಾಚಾರ ಸರ್ಕಾರದ ಮುಂದಿದೆ.
ಮುಜರಾಯಿ ಇಲಾಖೆ ಮಾಹಿತಿ ಪ್ರಕಾರ ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾಗಿರುವ ಮೈಸೂರು ಮಹಾರಾಜಾ ಕಾಲೇಜಿನಲ್ಲಿರುವ ಸಂಸ್ಕೃತ ಶಾಲೆ ಹಾಗೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಾಮರಾಜೇಂದ್ರ ಸಂಸ್ಕೃತ ಪಾಠ ಶಾಲೆ ಮಾತ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿದೆ. ಉಳಿದಂತೆ ಎಲ್ಲವೂ ಖಾಸಗಿ ಸಂಸ್ಕೃತ ವೇದ ಪಾಠ ಶಾಲೆಗಳಾಗಿದ್ದು, ಕೆಲವು ಖಾಸಗಿ ಸಂಸ್ಕೃತ ಪಾಠ ಶಾಲೆಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ.

ಖಾಸಗಿ ಅರ್ಚಕರಿಗೆ ಬೇಡಿಕೆ: ಖಾಸಗಿ ಸಂಸ್ಕೃತ ಶಾಲೆಗಳು ಹಾಗೂ ಪ್ರತಿಷ್ಠಿತ ಮಠಗಳಲ್ಲಿ ನಡೆಸುತ್ತಿರುವ ಸಂಸ್ಕೃತ ವೇದ ಪಾಠ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಬೇಡಿಕೆ ಇದೆ ಎನ್ನಲಾಗುತ್ತಿದೆ. ಹಿಂದೂ ಧರ್ಮದಲ್ಲಿ  ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಸಾಕಷ್ಟು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವುದರಿಂದ ಸಂಸ್ಕೃತ ವೇದಾಧ್ಯಯನ ಮಾಡಿದವರಿಗೆ ಧಾರ್ಮಿಕ ಕಾರ್ಯ ನಡೆಸಲು ಸಾಕಷ್ಟು ಬೇಡಿಕೆ ಇದೆಯಂತೆ. ಅರ್ಚಕರಿಗೆ ವಿದೇಶಗಳಲ್ಲಿಯೂ ಬೇಡಿಕೆ ಇರುವುದರಿಂದ ಖಾಸಗಿ ಸಂಸ್ಕೃತ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಳ್ಳಲು ಸಂಸ್ಕೃತ ವೇದಾಧ್ಯಯನ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.

ಯಾವ ದೇಗುಲಗಳಲ್ಲಿ ಶಾಲೆ?
ಕೊಲ್ಲೂರು ಮೂಕಾಂಬಿಕೆ
ಕುಕ್ಕೆ ಸುಬ್ರಮಣ್ಯ
ಸವದತ್ತಿ ಎಲ್ಲಮ್ಮ
ದೇವರಾಯನ ದುರ್ಗ
ಕಟೀಲು ದುರ್ಗಾ ಪರಮೇಶ್ವರಿ

ಮುಜರಾಯಿ ದೇವಸ್ಥಾನಗಳಲ್ಲಿ ಅರ್ಚಕರ ಕೊರತೆ ನೀಗಿಸಲು ಸರ್ಕಾರವೇ ಹೊಸದಾಗಿ ಸಂಸ್ಕೃತ ವೇದ ಪಾಠ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಅರ್ಚಕರಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ದಲಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳೂ ಸಂಸ್ಕೃತ ಕಲಿತು ದೇವಸ್ಥಾನಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಐದು ಸಂಸ್ಕೃತ ವೇದ ಪಾಠ ಶಾಲೆ ತೆರೆಯುವ ಉದ್ದೇಶ ಹೊಂದಿದ್ದೇವೆ.
– ರುದ್ರಪ್ಪ ಲಮಾಣಿ, ಮುಜರಾಯಿ ಸಚಿವ.

– ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next