Advertisement

Team India; ಎಂ.ಎಸ್.ಧೋನಿ ‘ಜೆರ್ಸಿ ನಂ.7’ ಗೆ ವಿದಾಯ ಹೇಳಲಿದೆ ಬಿಸಿಸಿಐ

01:29 PM Dec 15, 2023 | Team Udayavani |

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಂಬರ್ 7 ಜೆರ್ಸಿಗೆ ವಿದಾಯ ಹೇಳಲು ನಿರ್ಧರಿಸಿದೆ. ಈ ಮೂಲಕ ನಂಬರ್ 7 ಜೆರ್ಸಿಯನ್ನು 16 ವರ್ಷಗಳ ಕಾಲ ಧರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ನೀಡಲಿದೆ ಎಂದು ವರದಿಯಾಗಿದೆ.

Advertisement

2019ರ ಏಕದಿನ ವಿಶ್ವಕಪ್ ನಲ್ಲಿ ಕೊನೆಯದಾಗಿ ಭಾರತದ ಪರ ಆಡಿದ್ದ ಎಂ.ಎಸ್ ಧೋನಿ ಅವರು 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಸದ್ಯ ಅವರು ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ.

ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನಂಬರ್ 10 ಜೆರ್ಸಿಗೆ ಬಿಸಿಸಿಐ ವಿದಾಯ ನೀಡಿತ್ತು. 2017ರಲ್ಲಿ ಶಾರ್ದೂಲ್ ಠಾಕೂರ್ ಅವರು ನಂಬರ್ 10 ಜೆರ್ಸಿ ಧರಿಸಿ ಆಡಿದ್ದರು. ಇದು ಭಾರಿ ಟೀಕೆಗೆ ಕಾರಣವಾಗಿತ್ತು. ಇದಾದ ಬಳಿಕ ಬಿಸಿಸಿಐ ಸಚಿನ್ ತೆಂಡೂಲ್ಕರ್ ಅವರ 10 ಜೆರ್ಸಿಗೆ ವಿದಾಯ ನೀಡಿತ್ತು.

ಜೆರ್ಸಿ ಸಂಖ್ಯೆಗೆ ವಿದಾಯ ನೀಡುವುದು ಅಂದರೆ ಮುಂದೆ ಯಾವುದೇ ಆಟಗಾರನಿಗೆ ಆ ಸಂಖ್ಯೆಯ ಜೆರ್ಸಿ ನೀಡದಿರುವುದು. ಅಂದರೆ ಭಾರತವನ್ನು ಪ್ರತಿನಿಧಿಸುವ ಯಾವುದೇ ಕ್ರಿಕೆಟ್ ಆಟಗಾರ ಜೆರ್ಸಿಯಲ್ಲಿ ನಂಬರ್ 10 ಬಳಸುವಂತಿಲ್ಲ. ಮುಂದೆ ಧೋನಿ ಜೆರ್ಸಿ ವಿದಾಯವೂ ಖಚಿತವಾದರೆ ನಂಬರ್ 7 ಕೂಡಾ ಬಳಸುವಂತಿಲ್ಲ.

ಬಿಸಿಸಿಐ ಈಗಾಗಲೇ ಯುವ ಮತ್ತು ಹಾಲಿ ಆಟಗಾರರಿಗೆ ಜೆರ್ಸಿ ಸಂಖ್ಯೆ 7 ಇನ್ನು ಮುಂದೆ ಆಯ್ಕೆಗೆ ಲಭ್ಯವಿಲ್ಲ ಎಂದು ಹೇಳಿದೆ. “ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರು ಎಂಎಸ್ ಧೋನಿ ಅವರ ನಂಬರ್ 7 ಜೆರ್ಸಿಯನ್ನು ಆಯ್ಕೆ ಮಾಡದಂತೆ ತಿಳಿಸಲಾಗಿದೆ. ಧೋನಿ ಆಟಕ್ಕೆ ನೀಡಿದ ಕೊಡುಗೆಗಾಗಿ ಅವರ ಟಿ-ಶರ್ಟ್ ಅನ್ನು ನಿವೃತ್ತಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಹೊಸ ಆಟಗಾರ 7 ನೇ ಸ್ಥಾನ ಪಡೆಯಲು ಸಾಧ್ಯವಿಲ್ಲ, ಮತ್ತು ಲಭ್ಯವಿರುವ ಸಂಖ್ಯೆಗಳ ಪಟ್ಟಿಯಿಂದ ನಂ. 10 ಈಗಾಗಲೇ ಹೊರಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

Advertisement

ಕ್ರಿಕೆಟಿಗರು ತಮ್ಮ ಜೆರ್ಸಿಯ ಹಿಂಭಾಗದಲ್ಲಿ 1 ರಿಂದ 100 ರವರೆಗಿನ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಲು ಐಸಿಸಿ ಅನುಮತಿಸುತ್ತದೆ. ರಾಷ್ಟ್ರೀಯ ತಂಡದಲ್ಲಿ ಹೊಸ ಆಟಗಾರ ಆಯ್ಕೆಯಾದಾಗ, ಅವನು ಅಥವಾ ಆಕೆಗೆ ಅವರ ಬೆನ್ನಿನಲ್ಲಿ ಯಾವ ಸಂಖ್ಯೆ ಬೇಕು ಎಂದು ಕೇಳಲಾಗುತ್ತದೆ. ಸಂಖ್ಯೆ ಲಭ್ಯವಿದ್ದರೆ, ಅದನ್ನು ಆ ಆಟಗಾರನಿಗೆ ನೀಡಲಾಗುತ್ತದೆ. ಉದಾಹರಣೆಗೆ, 2018 ರಲ್ಲಿ U19 ವಿಶ್ವಕಪ್‌ ನಲ್ಲಿ ಶುಬ್‌ಮನ್ ಗಿಲ್ ತನ್ನ ಜೆರ್ಸಿಗೆ 7 ನೇ ಸಂಖ್ಯೆಯನ್ನು ಬಯಸಿದ್ದರು ಆದರೆ ಅದು ಲಭ್ಯವಿಲ್ಲದ ಕಾರಣ, ಅವರು ಎರಡು 7 ಸಂಖ್ಯೆ ಪಡೆದರು. ಅವರು ಈಗಲೂ ಭಾರತ ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಪರ 77 ಜೆರ್ಸಿಯಲ್ಲಿ ಆಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next