Advertisement

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

11:16 AM Apr 28, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬ್ಲಾಕ್‌ ಸ್ಪಾಟ್‌ಗಳು ಮತ್ತೆ ಸೃಷ್ಟಿಯಾಗುತ್ತಿವೆ. ಅಕ್ಷರಸ್ಥರೇ ಬೀದಿ ಬದಿ, ಪಾಳು ಬಿದ್ದ ಜಾಗ, ಕಾಮಗಾರಿ ಪ್ರದೇಶ, ಮೆಟ್ರೋ ಪಿಲ್ಲರ್‌ ಕೆಳ ಭಾಗ, ಬಿಬಿಎಂಟಿಸಿ ಬಸ್‌ ನಿಲ್ದಾಣ ಹಿಂಭಾಗ ಕಸ ರಾಶಿ ಬೀಳುತ್ತಿದೆ. ಇದು ಪಾಲಿಕೆಯ ಘನತ್ಯಾಜ್ಯ ವಿಭಾಗಕ್ಕೂ ತಲೆನೋವು ತರಿಸಿದೆ. ಬ್ಲಾಕ್‌ ಸ್ಪಾಟ್‌ಗಳ ಕಸ ಬೆಳಗ್ಗೆ ತೆರವು ಮಾಡಿದ್ರೆ ರಾತ್ರಿ 11ರ ವೇಳೆಗೆ ಮತ್ತೆ ರಾಶಿ ಬಿದ್ದಿರುತ್ತದೆ. ಬೀದಿ ಬದಿಯಲ್ಲೇ ತುಂಡು ಮಾಂಸ, ಹಸಿ ಆಹಾರ ಪದಾರ್ಥ ನಾರುತ್ತಿರುತ್ತದೆ.

Advertisement

ಜಯನಗರ 4ನೇ ಹಂತದ ತಿಲಕ್‌ ನಗರದ ಕೃಷ್ಣಪ್ಪ ಗಾರ್ಡ್‌ ವ್ಯಾಪ್ತಿಯ ಪ್ರದೇಶ, ರಾಗಿಗುಡ್ಡದ ಸಮೀಪದ ಮೆಟ್ರೋ ಪಿಲ್ಲರ್‌ ಕೆಳಭಾಗದ ಜಾಗ, ಜೆ.ಪಿ.ನಗರ 6ನೇ ಹಂತದ ಪುಟ್ಟೇನಹಳ್ಳಿಯ ಈಶ್ವರ ದೇವಸ್ಥಾನ ಬಳಿಯ ಬಸ್‌ ನಿಲ್ದಾಣ, ಸಿದ್ದೇಶ್ವರ ಟಾಕೀಸ್‌ ಬಳಿಯ ಪ್ರದೇಶ, ಇಂಚರ ಹೋಟೆಲ್‌ ಹಿಂಭಾಗದ ಪಾಳು ಬಿದ್ದ ಜಾಗ ಸೇರಿ ಹಲವು ಕಡೆಗಳಲ್ಲಿ ಬ್ಲಾಕ್‌ ಸ್ಪಾಟ್‌ಗಳು ಸೃಷ್ಟಿಯಾಗಿವೆ. ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದಿ ನಾಯಿಗಳ ಕಾಟ: ಜೆ.ಪಿ. ನಗರ 6ನೇ ಹಂತದ ಹಲವು ವಾರ್ಡ್‌ಗಳಲ್ಲಿ ಬ್ಲಾಕ್‌ ಸ್ಟಾಟ್‌ಗಳು ಕಂಡು ಬರುತ್ತಿವೆ. ಸಿದ್ದೇಶ್ವರ ಟಾಕೀಸ್‌ ಬಳಿ, ಇಂಚರ ಹೋಟೆಲ್‌ ಹಿಂಭಾಗದ ಪಾಳು ಬಿದ್ದ ಜಾಗದಲ್ಲಿ ರಾತ್ರಿ ಕಸದ ದುರ್ನಾತ ಬೀರುತ್ತದೆ. ಹಸಿ ಆಹಾರ ಪದಾರ್ಥಗಳ ಜತೆಗೆ ಮಾಂಸದ ಮೂಳೆಗಳನ್ನೂ ಎಸೆಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕವರ್‌ಗಳಲ್ಲಿ ತುಂಬಿ ಹಾಕಿದ ಹಸಿ ಕಸವನ್ನು ನಾಯಿಗಳು ಎಲ್ಲೆಂದರಲ್ಲಿ ಎಳೆದಾಡುತ್ತಿವೆ. ರಾತ್ರಿ ವೇಳೆಗೆ ಓಡಾಡಲು ಭಯವಾಗುತ್ತದೆ ಎಂದು ಇಂಚರ ಹೋಟೆಲ್‌ ಹಿಂಭಾಗದ ಪ್ರದೇಶದ ನಿವಾಸಿ ಷಣ್ಮುಗನ್‌ ಹೇಳುತ್ತಾರೆ.

ಬ್ಲಾಕ್‌ ಸ್ಟಾಟ್‌ಗಳಲ್ಲಿ ಸಿಗುವ ಆಹಾರ ತಿನ್ನಲು ರಾತ್ರಿ ವೇಳೆ ಗುಂಪು ಗುಂಪಾಗಿ ಬೀದಿನಾಯಿಗಳು ಸೇರುವುದರಿಂದ ಬೈಕ್‌ ಸವಾರರು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ನಾಯಿ ಇವೆ ಎಂದು ಜೋರಾಗಿ ಬೈಕ್‌ ಓಡಿಸಲು ಮುಂದಾದರೆ ಚಿರತೆಯಂತೆ ಮೈ ಮೇಲೆ ಎಗರುತ್ತವೆ. ಇದು ನನಗೂ ಅನುಭವವಾಗಿದೆ ಎಂದು ಐಟಿ-ಬಿಟಿ ಉದ್ಯೋಗಿ ಶಿವಶಂಕರನ್‌ ಹೇಳುತ್ತಾರೆ. ತಿಳಿವಳಿಕೆಯಿದ್ದವರೆ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಹೇಳಿದರೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನಗರದ ಜಯದೇವ ಹೃದ್ರೋಗ ಆಸ್ಪತ್ರೆ ಕಡೆಯಿಂದ ಬನಶಂಕರಿಯತ್ತ ಸಾಗಿದರೆ ಮೆಟ್ರೋ ಪಿಲ್ಲರ್‌ ಕೆಳಭಾಗ ಕಸದ ರಾಶಿ ಕಾಣಸಿಗುತ್ತದೆ. ಮೆಟ್ರೋ ಪಿಲ್ಲರ್‌ ಕೆಳಗಡೆ ಹರಿದ ಚಾಪೆ, ದಿಂಬುಗಳು ಕಂಡು ಬರುತ್ತವೆ. ಜತೆಗೆ ಕಪ್ಪು ಪ್ಲಾಸ್ಟಿಕ್‌ ಕವರ್‌ನಲ್ಲಿ ತುಂಬಿದ ಕಸದ ಮೂಟೆಗಳು ಕಾಣಸಿಗುತ್ತವೆ. ಪೌರಕಾರ್ಮಿಕರು ಪ್ರತಿ ದಿನ ಕಸ ಎತ್ತಿ ಹಾಕುತ್ತಾರೆ. ಮತ್ತೆ ಮರುದಿನ ರಾತ್ರಿಯಾಗುತ್ತಿದ್ದಂತೆ ಕಸದ ರಾಶಿ ಬಂದು ಬೀಳುತ್ತದೆ ಎಂದು ರಾಗಿಗುಡ್ಡದ ಬಳಿಯ ನಿವಾಸಿ ಮುಂಜುನಾಥ್‌ ಹೇಳುತ್ತಾರೆ.

ಮಾರ್ಷಲ್‌ಗ‌ಳಿದ್ದರೂ ಸಮಸ್ಯೆ ತಪ್ಪಿಲ್ಲ:

Advertisement

ಬಿಬಿಎಂಪಿ ಪ್ರತಿ ವರ್ಷ ಸಾವಿರ ಕೋಟಿ ರೂ. ಅನ್ನು ಬೆಂಗಳೂರಿನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ವೆಚ್ಚ ಮಾಡುತ್ತಿದೆ. ಎಲ್ಲೆಂದರಲ್ಲಿ ಕಸ ಸುರಿಯುವು ದನ್ನು ತಡೆಯಲು, ದಂಡ ವಿಧಿಸಲು ಮಾರ್ಷಲ್‌ಗ‌ಳ ನಿಯೋಜಿಸಲಾಗಿದೆ. ಬ್ಲಾಕ್‌ಸ್ಪಾಟ್‌ಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಕೆ, ಜಾಗೃತಿ ಮೂಡಿಸು ವುದು, ರಂಗೋಲಿ ಹಾಕುವುದು, ಏನೆಲ್ಲ ಪ್ರಯೋಗ ಮಾಡಿದ್ರೂ ಬ್ಲಾಕ್‌ಸ್ಪಾಟ್‌ನಿಂದ ಮುಕ್ತಿ ದೊರೆತ್ತಿಲ್ಲ. ಕಸದ ವಾಹನ ದಿನವೂ ಪೀಪಿ ಊದುತ್ತಾ ಮನೆ ಮುಂದೆ ಬಂದು ನಿಂತರೂ ಕೆಲವರು ಕಸ ಹಾಕುವುದಿಲ್ಲ. ಕಸದ ವಾಹನ ಬಂದಾಗಲೂ ಮಲಗಿರುತ್ತಾರೆ. ಅಂಥವರು ಬ್ಲಾಕ್‌ ಸ್ಟಾಟ್‌ಗಳ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಬಿಬಿಎಂಪಿ ಕೂಡ ಬ್ಲಾಕ್‌ ಸ್ಟಾಟ್‌ಗಳ ತಪ್ಪಿಸಲು ಹಲವು ಪ್ರಯತ್ನಕ್ಕೆ ಇಳಿದಿದೆ. ಬ್ಲಾಕ್‌ಸ್ಪಾಟ್‌ ಜಾಗಗಳಲ್ಲಿ ಬ್ಯಾನರ್‌ ಅಳ ವಡಿಕೆ ಮಾಡಿ ದಂಡ ಪ್ರಯೋಗ ಎಚ್ಚರಿಕೆ ನೀಡಲಾ ಗುತ್ತಿದೆ. ಆದರೂ, ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ದೂರುತ್ತಾರೆ.

ಲಾಲ್‌ಬಾಗ್‌ ಕೆರೆಗೂ ಕೆಲವರು ಹೂವು-ಹಣ್ಣು, ತೆಂಗಿನಕಾಯಿ, ಪೂಜಾ ಸಾಮಗ್ರಿಗಳನ್ನು ಮೂಟೆಯಲ್ಲಿ ತಂದು ಕೆರೆ ಹಾಕಿ ಕಲುಷಿತಗೊಳಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಪಾಲಿಕೆಗೆ ತೆರಿಗೆ ನೀಡುವುದಿಲ್ಲವೇ ಅವರು ಕಸ ತೆಗೆಯಲಿ ಎಂದು ವಾದ ಮಾಡುತ್ತಾರೆ. ಸಿಂಗಾಪುರ ಸೇರಿ ಕೆಲವು ಮುಂದುವರಿದ ದೇಶಗಳಲ್ಲಿ ಎಲ್ಲೊಂದರಲ್ಲಿ ಕಸಹಾಕಿದರೆ ಪೊಲೀಸರೇ ಕಸ ಹಾಕಿದ ವ್ಯಕ್ತಿಯನ್ನು ಹಿಡಿದು ದಂಡ ಹಾಕುತ್ತಾರೆ. ಅಂತಹ ಕಠಿಣ ಕ್ರಮ ಬಿಬಿಎಂಪಿಯಲ್ಲಿ ಜಾರಿಗೆ ಬರಬೇಕು.-ಎ.ಎನ್‌.ಯಲ್ಲಪ್ಪರೆಡ್ಡಿ, ಪರಿಸರವಾದಿ, ಅಧ್ಯಕ್ಷ, ಲಾಲ್‌ಬಾಗ್‌ ಸಲಹಾ ಸಮಿತಿ  

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next