ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ರಾಜಧಾನಿಯ ಬಹುತೇಕ ಯುವ ಜನತೆ ಕುಡಿದು, ತೇಲಾಡಿ ಎಲ್ಲೆಂದರಲ್ಲಿ ಅನುಪಯುಕ್ತ ವಸ್ತುಗಳನ್ನು ಎಸೆದಿದ್ದರು. ಈಗ ಎಂ.ಜಿ ರಸ್ತೆ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಅನುಪಯುಕ್ತ ವಸ್ತುಗಳು ಸೇರಿ ಬರೋಬ್ಬರಿ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರಿ ಬಾ ರಸ್ತೆ ಸೇರಿದಂತೆ ರಾಜಧಾನಿಯ ಹಲವು ರಸ್ತೆಗಳಲ್ಲಿ 70 ಬಿಬಿಎಂಪಿ ಪೌರಕಾರ್ಮಿಕರು ಶಾಂತಿನಗರ ವಿಭಾಗದ ಘನತ್ಯಾಜ್ಯ ವಿಭಾಗದಿಂದ ಮುಂಜಾನೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಸ್ವತ್ಛತಾ ಕಾರ್ಯ ನಡೆಸಿದ್ದಾರೆ.
3 ಟನ್ ಪುನರ್ ಬಳಕೆ ವಸ್ತುಗಳು: ಪೂರ್ವ ವಲಯ ಆಯುಕ್ತರಾದ ಸ್ನೇಹಲ್, ಜಲಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ನೇತೃತ್ವದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವಿಭಾಗದ ಮೇಲ್ವಿಚಾರಣೆಯಲ್ಲಿ ಪೌರಕಾರ್ಮಿಕ ಸಿಬ್ಬಂದಿ ಬೀದಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿಗಳು ಸೇರಿದಂತೆ ಒಟ್ಟು 15 ಮೆಟ್ರಿಕ್ ಟನ್ ತ್ಯಾಜ್ಯವನ್ನು 25 ಆಟೋ ಟಿಪ್ಪರ್ 3 ಕಾಂಪ್ಯಾಕ್ಟರ್ಗಳ ಮೂಲಕ ಸಂಗ್ರಹಿಸಿದ್ದು, ಇದರಲ್ಲಿ ಪುನರ್ ಬಳಕೆಯ ಸುಮಾರು 3 ಟನ್ ತ್ಯಾಜ್ಯವನ್ನು ವಿಭಾಗಿಸಿ ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ.
ಈ ವೇಳೆ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಕುಮಾರ್, ಚೀಫ್ ಮಾರ್ಷಲ್ ರಜಿºರ್ ಸಿಂಗ್, ಸಹಾಯಕ ಕಾರ್ಯಪಾಲಕ ಅಭಿಯತರರಾದ ಅಪ್ಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.