Advertisement

ಮೊಗವೀರ ವ್ಯವಸ್ಥಾಪಕ ಮಂಡಳಿ: ಆಟಿಡೊಂಜಿ ಕೂಟ

04:25 PM Aug 05, 2018 | Team Udayavani |

ಮುಂಬಯಿ: ತುಳುನಾಡಿನ ನಮ್ಮ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು, ಬೇರೆ ಬೇರೆ ಉದ್ದೇಶಗಳಿಗಾಗಿ ಹುಟ್ಟೂರಿನಿಂದ ಮುಂಬಯಿಗೆ ಬಂದು ನೆಲೆಸಿರುವ ತುಳುವರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೆ ಇಲ್ಲಿಯೂ ಕೂಡಾ, ಅದರ ಉಳಿವಿಗಾಗಿ ಪ್ರಯತ್ನಿಸುತ್ತಿರುವುದು ಸುತ್ಯರ್ಹವಾಗಿದೆ. ಇಂದಿನ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಅದನ್ನು ಅವರು ಮುಂದುವರಿಸಿಕೊಂಡು ಹೋಗು ವಂತೆ ಮಾಡುವಲ್ಲಿ ಆಟಿಡೊಂಜಿ ಕೂಟದಂತಹ ಕಾರ್ಯಕ್ರಮವು ಉಪಯುಕ್ತವಾಗಿದೆ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿಯ ನವಿಮುಂಬಯಿ ಶಾಖೆಯ ಗೌರವಾಧ್ಯಕ್ಷ ಕೆ. ಟಿ. ಸಾಲ್ಯಾನ್‌ ಅವರು ನುಡಿದರು.

Advertisement

ಜು. 29 ರಂದು ಪನ್ವೇಲ್‌ ಕಾಂದಾ ಕಾಲನಿಯಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ನವಿಮುಂಬಯಿ ಶಾಖೆಯ ಕಚೇರಿಯಲ್ಲಿ ಜರಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಹೆಚ್ಚು ವಿದ್ಯಾವಂತರಾಗಿರದಿದ್ದರೂ ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಆ  ಅನ್ಯೋನ್ಯತೆ ಈಗಿನ ಕಾಲದಲ್ಲಿ ಮರೆ ಆಗುತ್ತಿರುವುದು ವಿಷಾದ‌ನೀಯ. ನಮ್ಮ ಹಿರಿಯರ ಉತ್ತಮ ಗುಣವನ್ನು ಮೈಗೂಡಿಸಿಕೊಂಡಲ್ಲಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದರು.

ಮುಂಬಯಿ ಲೇಖಕ ಸೋಮನಾಥ ಎಸ್‌. ಕರ್ಕೇರ ಅವರು ಆಟಿತಿಂಗಳ ವಿಶೇಷತೆಯ ಬಗ್ಗೆ ತಿಳಿಸಿ, ಆಟಿದ ಕೂಟದಂತಹ ಕಾರ್ಯಕ್ರಮದ ಮೂಲಕ ಸದಸ್ಯರಲ್ಲಿ ಒಗ್ಗಟ್ಟನ್ನು  ಮೂಡಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಮಹಿಳಾ ವಿಭಾಗದ ಹಿರಿಯ ಸದಸ್ಯೆ ಜಯಲತಾ ಸಾಲ್ಯಾನ್‌ ಅವರು ಮಾತನಾಡಿ, ನಾವು ಆಚರಿಸುತ್ತಿರುವ ಹಬ್ಬಹರಿದಿನಗಳು ನಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬುವ ಜೊತೆಗೆ ನಮ್ಮಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು. ಸಿದ್ಧಾರ್ಥ ಎಲ್‌. ಕೋಟ್ಯಾನ್‌ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ನವಿಮುಂಬಯಿ ಶಾಖೆಯ ಅಧ್ಯಕ್ಷ ಪುರುಷೋತ್ತಮ ಎಲ್‌. ಪುತ್ರನ್‌ ಅವರು ಮಾತನಾಡಿ, ಈಗಲೂ ನಮ್ಮಲ್ಲಿ ಕೆಲವು ಮೂಢನಂಬಿಕೆಗಳು ಮನೆಮಾಡಿದ್ದು, ಅವುಗಳಿಗೆ ಬಲಿ ಬೀಳದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. 

Advertisement

ಗೌರವ ಜೊತೆ ಕಾರ್ಯದರ್ಶಿ ತೇಜಸ್ವಿ ಮಲ್ಪೆ ವಂದಿಸಿದರು.
ಮಹಿಳಾ ವಿಭಾಗದ ಸದಸ್ಯರು ಆಟಿತಿಂಗಳ ವಿಶೇಷ ಖಾದ್ಯ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು.  ಸದಸ್ಯರಿಗಾಗಿ ಕೇವಲ 30 ಸೆಕೆಂಡ್‌ಗಳಲ್ಲಿ ಅತೀ ಹೆಚ್ಚು ಮೀನುಗಳ ಹೆಸರನ್ನು ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಸಿದ್ದಾರ್ಥ ಕೋಟ್ಯಾನ್‌, ಮೋಹನ್‌ದಾಸ್‌ ಅವರು ಪ್ರಥಮ, ಉಮೇಶ್‌ ಕರ್ಕೇರ ದ್ವಿತೀಯ, ಯೋಗೇಶ್‌ ಎಂ. ಕರ್ಕೇರ ಅವರು ತೃತೀಯ ಬಹುಮಾನಗಳನ್ನು ಪಡೆದರು.

ನವಿಮುಂಬಯಿ ಶಾಖೆಯ ಗೌರವಾಧ್ಯಕ್ಷ ಕೆ. ಬಿ. ಸಾಲ್ಯಾನ್‌, ಅಧ್ಯಕ್ಷ ಪುರುಷೋತ್ತಮ ಎಲ್‌. ಪುತ್ರನ್‌, ಕಾರ್ಯದರ್ಶಿ ಪುಷ್ಪರಾಜ್‌ ಮೆಂಡನ್‌, ಉಪಾಧ್ಯಕ್ಷರಾದ ಲೋಕೇಶ್‌ ಎಂ. ಕರ್ಕೇರ, ಸೋಮನಾಥ ಎಸ್‌. ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸದಸ್ಯರು, ಅವರ ಮಕ್ಕಳು ಮತ್ತು ಕುಟುಂಬಸ್ಥರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next