Advertisement

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

08:54 PM Dec 25, 2024 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್‌ ನಮೂದು ಬಗ್ಗೆ ವಿವಾದ ಉಂಟಾಗಿ ರಾಜ್ಯ ಬಿಜೆಪಿ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡೆಸುತ್ತಿರುವ ಹೋರಾಟದ ನಡುವೆಯೇ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ವಕ್ಫ್ ಮಸೂದೆ ತಿದ್ದುಪಡಿಯ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಎದುರು ಗುರುವಾರ ಹಾಜರಾಗಲಿದ್ದಾರೆ.

Advertisement

ಗುರುವಾರದಿಂದ ಎರಡು ದಿನಗಳ ಕಾಲ ಸಭೆ ನಡೆಸಲಿರುವ ಸಂಸದ ಜಗದಾಂಬಿಕಾ ಪಾಲ್‌ ನೇತೃತ್ವದ ವಕ್ಫ್ ಮಸೂದೆ ತಿದ್ದುಪಡಿಯ ಜಂಟಿ ಸಂಸದೀಯ ಸಮಿತಿಯು ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಒಡಿಶಾ ಹಾಗೂ ದೆಹಲಿ ಸರಕಾರದ ಪ್ರತಿನಿಧಿಗಳ ಅಭಿಪ್ರಾಯ ಕೇಳಲಿದೆ. ವಕ್ಫ್ ಅಕ್ರಮವಾಗಿ ಕಬಳಿಸಿದೆ ಎನ್ನಲಾದ ಆಸ್ತಿ ಬಗ್ಗೆ ವಿವರ ನೀಡಲು ರಾಜ್ಯ  ಸರಕಾರಗಳಿಗೆ ಜಂಟಿ ಸಮಿತಿಯು ಪತ್ರ ಬರೆದಿದೆ.

ಕರ್ನಾಟಕಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದ್ದ ಜೆಪಿಸಿ ಅಧ್ಯಕ್ಷ:
ಕರ್ನಾಟಕದಲ್ಲಿ ವಕ್ಫ್‌ಬೋರ್ಡ್‌ 1,500 ಎಕರೆಗೂ ಅಧಿಕ ಭೂಮಿಯನ್ನು ಕಬಳಿಸಲು ರೈತರಿಗೆ ನೋಟಿಸ್‌ ನೀಡಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿತ್ತು.  ರೈತರಿಗೆ ವಕ್ಫ್‌ಬೋರ್ಡ್‌ ನೋಟಿಸ್‌ ಕೊಟ್ಟಿರುವುದು ವಿರೋಧಿಸಿ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ್ದರು. ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ವಿಜಯಪುರ ಸೇರಿದಂತೆ ಇತರೆಡೆ ಭೇಟಿ ನೀಡಿ ವಕ್ಫ್‌ಬೋರ್ಡ್‌ ನೀಡಿದ ನೋಟಿಸ್‌ಗೆ ಸಂಬಂಧಿಸಿ ರೈತರ ಅಹವಾಲುಗಳ ಸ್ವೀಕರಿಸಿ ಚರ್ಚಿಸಿದ್ದರು.

ದೆಹಲಿ ಸರಕಾರದ ಪರವಾಗಿ ಆಹಾರ ಸಚಿವ ಇಮ್ರಾನ್‌ ಹುಸೇನ್‌  ಶುಕ್ರವಾರ ಜೆಪಿಸಿ ಎದುರು ಹಾಜರಾಗಿ ವಕ್ಫ್‌ಬೋರ್ಡ್‌ ಭೂ ವಿವಾದಕ್ಕೆ ಸಂಬಂಧಿಸಿದ ದಾಖಲೆಗಳು, ಮಾಹಿತಿಗಳನ್ನು ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next