ವಿಧಾನಪರಿಷತ್ತು: ಅಲೆಮಾರಿ ಜನಾಂಗದ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.4ರಷ್ಟಿದ್ದ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಶಾಂತರಾಮ್ ಸಿದ್ದಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಅಲೆಮಾರಿ ಜನಾಂಗದ ಮಕ್ಕಳಿಗೆ ಶೇ.4ರಷ್ಟು ಮೀಸಲಾತಿ ಇತ್ತು. ಅದನ್ನು ಈಗ ಶೇ.10ಕ್ಕೆ ಹೆಚ್ಚಿಸಲಾಗಿದೆ ಎಂದರು.
ಅಲ್ಲದೇ ರಾಜ್ಯದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಅಲೆಮಾರಿ ಜನಾಂಗದ ಮಕ್ಕಳಿಗೆ 9 ಹಾಸ್ಟೆಲ್‌ಗಳನ್ನು ಕಟ್ಟಲಾಗುತ್ತಿದೆ. ಅಲೆಮಾರಿ ಕೋಶದ ಕಚೇರಿಯನ್ನು ಕೇಂದ್ರ ಕಚೇರಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ದಕ್ಕಲಿಗ ಎಂಬ ಜನಾಂಗ ಇದೆ. ಅದರ ಒಟ್ಟು ಜನಸಂಖ್ಯೆ 1,300 ಇದೆ. ಗದಗದಲ್ಲಿ ಹರಿಣಿ ಶಿಕಾರಿ, ವಿಜಯಪುರದಲ್ಲಿ ಹಂದಿಗೊಲ್ಲರು ಎಂಬ ಅಲೆಮಾರಿ ಜನಾಂಗವಿದೆ. ಈ ರೀತಿ ಒಂದು ಊರಿಂದ ಮತ್ತೂಂದು ಊರಿಗೆ ಹೋಗಿ ನಲೆಸಿ ಜೀವನ ನಡೆಸುವ ಸೂಕ್ಷ್ಮ, ಅತೀ ಸೂಕ್ಷ್ಮ ಅಲೆಮಾರಿ ಜನಾಂಗಗಳು ಇದ್ದಾವೆ. ಇವರ ಜನಸಂಖ್ಯೆ 20 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಇದನ್ನೂ ಓದಿ:ಏ.26ರಿಂದ ಸಿಬಿಎಸ್‌ಇ 2ನೇ ಹಂತದ ಪರೀಕ್ಷೆ
ಅಲೆಮಾರಿ ಕೋಶವನ್ನು ನಿಗಮವನ್ನಾಗಿ ಪರಿವರ್ತಿಸಬೇಕು ಎಂದು ಶಾಂತರಾಮ್ ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ, ಜಾತಿ-ಸಮುದಾಯಗಳ ಹೆಸರಲ್ಲಿ ನಿಗಮ ಮಾಡಿರುವುದರಿಂದ ಬೇರೆ ರೀತಿಯ ಚರ್ಚೆಗಳು ಆಗುತ್ತಿವೆ. ಅಲ್ಲದೇ ಆರ್ಥಿಕ ಇತಿಮಿತಿಗಳನ್ನು ಸಹ ನೋಡಬೇಕಾಗುತ್ತದೆ. ಮೇಲಾಗಿ, ಜಾತಿ-ಸಮುದಾಯಗಳ ಹೆಸರಲ್ಲಿ ನಿಗಮ ಮಾಡುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರತ್ಯೇಕ ನಿಗಮ ಅಲ್ಲದಿದ್ದರೂ, ಅಲೆಮಾರಿ ಕೋಶದ ಮೂಲಕ ಅಲೆಮಾರಿಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಈ ವಿಚಾರವಾಗಿ ಅಧಿವೇಶನ ಮುಗಿದ ಬಳಿಕ ಸಂಬಂಧಪಟ್ಟ ಶಾಸಕರ ಸಭೆ ಕರೆದು ಅಲೆಮಾರಿಗಳ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.