ಮಲ್ಪೆ: ರಾಷ್ಟ್ರೀಯ ಹೆದ್ದಾರಿಯ ಆದಿಉಡುಪಿಯಲ್ಲಿ ಚತುಷ್ಪತ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುರಿಂದ ದ್ವಿಮುಖವಾಗಿ ಚಲಿಸುವ ವಾಹನಗಳು ಒಂದೇ ಬದಿ ಸಂಚರಿಸುವುದರಿಂದ ಆದಿಉಡುಪಿ ಶಾಲಾ ಮಕ್ಕಳಿಗೆ ಈಗ ರಸ್ತೆ ದಾಟುವುದೇ ಒಂದು ದುಸ್ಸಾಹಸವಾಗಿದೆ.
ರಸ್ತೆ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಉಡುಪಿ ಕಡೆಗೆ ಹೋಗುವ ಮತ್ತು ಮಲ್ಪೆ ಕಡೆಗೆ ಬರುವ ವಾಹನಗಳು ರಸ್ತೆಯ ಇನ್ನೊಂದು ಬದಿಯಲ್ಲಿ ಚಲಿಸುತ್ತದೆ. ಪಕ್ಕದಲ್ಲೇ ಶಾಲೆ ಇರುವುದರಿಂದ ಮಕ್ಕಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಇದರಿಂದ ಶಾಲಾ ಶಿಕ್ಷಕರಿಗೆ, ಆಡಳಿತ ಮಂಡಳಿಗೆ, ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ಅನಿವಾರ್ಯತೆ ಎದುರಾಗಿದೆ.
ಈ ಶಾಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಸುಮಾರು 800 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಳಗ್ಗೆ ಹೇಗಾದರೂ ಮಾಡಿ ಶಾಲೆಗೆ ಬಂದರೆ, ಸಂಜೆ ಶಾಲೆ ಬಿಟ್ಟ ಸಮಯದಲ್ಲಿ ಸುಮಾರು 300 ವಿದ್ಯಾರ್ಥಿಗಳು ಬಸ್ ಹತ್ತಲು ಬಹಳ ಆತಂಕದಿಂದಲೇ ರಸ್ತೆ ದಾಟುವಂತಾಗಿದೆ.
ಬೆಳಗ್ಗಿನಿಂದ ಸಂಜೆಯವರೆಗೂ ಬಸ್, ಲಾರಿ, ಟ್ಯಾಕ್ಸಿ, ಆಟೋ ಸೇರಿದಂತೆ ವಾಹನದ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮಾತ್ರವಲ್ಲದೆ ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್, ಸೈಂಟ್‌ಮೇರೀಸ್ ಐಲ್ಯಾಂಡ್, ವಾಣಿಜ್ಯ ಕೇಂದ್ರವಾದ ಮೀನುಗಾರಿಕೆ ಬಂದರಿನಿಂದ ಮಲ್ಪೆ ಕಡೆಗೆ ತೆರಳುವ ವಾಹನಗಳ ಓಡಾಟವು ಮಿತಿ ಮೀರಿದೆ. ಹೀಗಾಗಿ ಶಾಲಾ ಮಕ್ಕಳು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಹಾಗಾಗಿ ಸದ್ಯ ಆಡಳಿತ ಮಂಡಳಿಯ ಗಣೇಶ್ ರಾವ್ ಅವರು ನಿತ್ಯ ರಸ್ತೆ ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೂದಲೆಳೆಯ ಅಂತರದಲ್ಲಿ ದುರಂತಗಳು ತಪ್ಪಿದ ಘಟನೆಗಳು ನಡೆದಿವೆ. ಕಾಮಗಾರಿ ಮುಗಿಯುವರೆಗೆ ಇಲ್ಲಿನ ಏಕಮುಖ ಸಂಚಾರ ಇಲ್ಲವೆ ಪೊಲೀಸ್ ಸಿಬಂದಿಯನ್ನು ನೇಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಸಿಬಂದಿ ನೇಮಿಸಿ
ಶಾಲೆ ಬಿಡುವ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗಾಗಿ ಪೊಲೀಸ್ ಸಿಬಂದಿಯನ್ನು ನಿಯೋಜಿಸುವ ಮೂಲಕ ಮಕ್ಕಳ ಸುರಕ್ಷತೆ ಕಾಪಾಡಲು ಸಹಕರಿಸಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಮಕ್ಕಳ ರಕ್ಷಣೆ ವಿಚಾರದಲ್ಲಿ ತುರ್ತು ಅಗತ್ಯ ಕ್ರಮಗಳನ್ನು ಜರಗಿಸಬೇಕು.
-ಗಣೇಶ್ ರಾವ್, ಕಾರ್ಯದರ್ಶಿ ಶಾಲಾಡಳಿತ ಮಂಡಳಿ