ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ಪಟ್ಟಣ ಪಂಚಾಯತ್, ನಗರಸಭೆ ಹಾಗೂ ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಮನವಿ ಮೇರೆಗೆ ವಿಧಾನಸೌಧದಲ್ಲಿ ಶುಕ್ರವಾರ ಇಲಾಖೆಯ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು.
ಹಿಂದೆ ಗ್ರಾಮ ಪಂಚಾಯತ್‌ಗಳಾಗಿದ್ದ ಸಂದರ್ಭದಲ್ಲಿ ಅನುದಾನ ಬಿಡುಗಡೆಯಾಗಿತ್ತು. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ಅನುದಾನ ಕಡಿತವಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ ಎಂದು ಹಲವು ಶಾಸಕರು ಅಧಿವೇಶನದಲ್ಲೂ ಪ್ರಸ್ತಾವಿಸಿದ್ದಾರೆ. ಆದ್ದರಿಂದ ತತ್‌ಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದನ್ನೂ ಓದಿ:ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ
ಕಳೆದ ಸಾಲಿನಲ್ಲಿ 23 ಗ್ರಾ. ಪಂ.ಗಳಲ್ಲಿ 20 ಪಟ್ಟಣ ಪಂಚಾಯತ್, 2 ಪುರಸಭೆ, 1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಗ್ರಾಮ ಪಂಚಾಯತ್‌ಗಳಾಗಿದ್ದ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ತೆರಿಗೆ ಹಣ ಹಾಗೂ 14 ಮತ್ತು 15ನೇ ಹಣಕಾಸು ಆಯೋಗವು ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆ ಮಾಡಿರುವ 1 ಮತ್ತು 2ನೇ ಕಂತಿನ ಹಣವನ್ನು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಆಯುಕ್ತರಾದ ಶಿಲ್ಪಾನಾಗ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ| ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ ಅವರು ಉಪಸ್ಥಿತರಿದ್ದರು.