ಕೀವ್: ಅಸಹಾಯಕ ಉಕ್ರೇನ್ ಮೇಲೆ ಪ್ರಬಲ ದೇಶವಾದ ರಷ್ಯಾ ದಾಳಿ ನಡೆಸಿದಾಗ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ತಮ್ಮ ನೆಲದಲ್ಲಿ ಹೋರಾಡಲು ವಿದೇಶಿಯರಿಗೂ ಆಹ್ವಾನ ನೀಡಿದ್ದು ಗೊತ್ತೇ ಇದೆ. ಈಗ ಹೊಸ ವಿಷಯವೇನೆಂದರೆ, ರಷ್ಯಾ ಕೂಡ ಉಕ್ರೇನ್ ಮೇಲಿನ ಆಕ್ರಮಣಕ್ಕೆ ವಿದೇಶಿಯರನ್ನು ಬಳಸಿಕೊಳ್ಳುತ್ತಿದೆ!
ಉಕ್ರೇನ್‌ನಲ್ಲಿ ಹೋರಾಟ ಮಾಡಲು ಮಧ್ಯಪ್ರಾಚ್ಯ ದೇಶಗಳಿಂದ 16 ಸಾವಿರ ಮಂದಿಯನ್ನು ಕರೆಸಿಕೊಳ್ಳುವ ಪ್ರಸ್ತಾಪಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಹಾಕಿದ್ದಾರೆ ಎಂಬ ಆಘಾತಕಾರಿ ವಿಚಾರ ಈಗ ಬಯಲಾಗಿದೆ.
ಪೂರ್ವ ಉಕ್ರೇನ್‌ಗೆ ಆಗಮಿಸಿ ರಷ್ಯಾ ಬೆಂಬಲಿತ ಪಡೆಗಳೊಂದಿಗೆ ಸೇರಿ ಹೋರಾಡಲು ಮಧ್ಯಪ್ರಾಚ್ಯದ 16 ಸಾವಿರ ಸ್ವಯಂಸೇವಕರು ಸನ್ನದ್ಧರಾಗಿದ್ದಾರೆ ಎಂದು ರಷ್ಯಾ ಭದ್ರತಾ ಮಂಡಳಿ ಸಭೆಯಲ್ಲಿ ರಕ್ಷಣಾ ಸಚಿವ ಸರ್ಗೆ ಶೊಯಿಗು ತಿಳಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಮರಕ್ಕೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಐವರ ದುರ್ಮರಣ
ಇದಕ್ಕೆ ಪ್ರತಿಕ್ರಿಯಿಸಿರುವ ಪುಟಿನ್, “ಡಾನ್‌ಬಾಸ್ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಾಗಿ ಹಣದ ಆಸೆಯಿಲ್ಲದೇ ಸ್ವಯಂಪ್ರೇರಿತವಾಗಿ ಹೋರಾಡಲು ಯಾರೇ ಮುಂದೆ ಬಂದರೂ ಅವರಿಗೆ ಅನುಮತಿ ನೀಡಲಾಗುವುದು’ ಎಂದಿದ್ದಾರೆ. ಅಷ್ಟೇ ಅಲ್ಲ, ಉಕ್ರೇನ್‌ನಲ್ಲಿ ರಷ್ಯಾ ಪಡೆ ವಶಕ್ಕೆ ಪಡೆದಿರುವ ಜಾವೆಲಿನ್ ಮತ್ತು ಸ್ಟಿಂಗರ್ ಕ್ಷಿಪಣಿಗಳನ್ನು ಡಾನ್‌ಬಾಸ್ ಪಡೆಗಳಿಗೆ ಹಸ್ತಾಂತರ ಮಾಡಲೂ ಅನುಮತಿ ನೀಡುತ್ತಿದ್ದೇನೆ ಎಂದೂ ಪುಟಿನ್ ಹೇಳಿದ್ದಾರೆ ಎನ್ನಲಾಗಿದೆ.