ಮಂಗಳೂರು: ಯುವ ನಟ – ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ದುಬೈಯಲ್ಲಿ ಜರುಗಿತು.
ಡಿಸೆಂಬರ್ 8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಆತ್ಮಾನಂದ ರೈ, ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಧಾಕರ ರಾವ್ ಪೇಜಾವರ, ಉದ್ಯಮಿಗಳಾದ ಡಾ. ಬು.ಅಬ್ದುಲ್ಲ, ಗುಣಶೀಲ ಶೆಟ್ಟಿ, ರಮಾನಂದ ಶೆಟ್ಟಿ, ಸಂದೀಪ್ ರೈ ನಂಜೆ, ಡಾ.ಶ್ರೀಮತಿ ರಶ್ಮಿ ನಂದ ಕಿಶೋರ್, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಚಿತ್ರ ತಂಡದ ನಿರ್ಮಾಪಕರು, ಸಹ ನಿರ್ಮಾಪಕರು, ಚಿತ್ರದ ನಟ ನಟಿಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು.
ವಿಶೇಷವೆಂದರೆ ಈ ಚಿತ್ರವು ಬಿಡುಗಡೆಯ ಮೊದಲೇ ಯುಎಇಯಲ್ಲಿ 30 ಲಕ್ಷಗಳ ಗಳಿಕೆಯನ್ನು ಯುಎಇ ಚಿತ್ರ ಪ್ರಸ್ತುತಿ ಪ್ರಾಯೋಜಕರ ಮೂಲಕ ಗಳಿಸಿದ್ದು ತುಳು ಚಿತ್ರರಂಗದಲ್ಲಿ ನೂತನ ದಾಖಲೆ ಬರೆದಿದ್ದು, ಟಿಕೆಟ್ ಬಿಡುಗಡೆಯ ದಿನವೇ 1500ಕ್ಕೂ ಹೆಚ್ಚಿನ ಟಿಕೆಟ್ ಮಾರಾಟದೊಂದಿಗೆ ದಾಖಲೆಯ ಪುಟ ಸೇರಿಕೊಂಡಿದೆ.
ನಾಯಕ ನಟ ವಿನೀತ್ ಕುಮಾರ್ ಮಾತನಾಡುತ್ತಾ ಹಿರಿಯವರ ಆರ್ಶಿವಾದೊಂದಿಗೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡಿ ತುಳುನಾಡಿನ ಜನರಿಗೆ ನೀಡಲಿದ್ದೇವೆ. ಒಳ್ಳೆಯ ಚಿತ್ರವನ್ನು ತುಳುವರು ಕೈ ಬಿಡಲ್ಲ ಎಂಬ ಧೈರ್ಯದಿಂದ ಈ ಚಿತ್ರವನ್ನು ಜನವರಿ 18, 19 ರಂದು ಯುಎಇಯ ತುಳುವರಿಗೆ ನೀಡಲಿದ್ದೆವೆ. ಎಲ್ಲರೂ ಚಿತ್ರವನ್ನು ನೋಡಿ ಈ ಚಿತ್ರವನ್ನು ಗೆಲ್ಲಿಸಬೇಕೆಂದು” ವಿನಂತಿಸಿದರು.
ವಿನೀತ್ ಕುಮಾರ್ ನಾಯಕ ನಟನಾಗಿ ಮತ್ತು ಸಮತಾ ಅಮೀನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ, ಚೈತ್ರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.