ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ವ್ಯಾಪ್ತಿಯ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಬಾಕಿ ಇರುವ ಪರೀಕ್ಷೆಗಳನ್ನು ತಾವು ದಾಖಲಾಗಿರುವ ಶಾಲೆಯಲ್ಲೇ (ತಮ್ಮದೇ ಶಾಲೆ) ಬರೆಯಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ.
ಪರೀಕ್ಷಾ ಕೇಂದ್ರದ ಅನುಮತಿ ಇಲ್ಲದ ಕೆಲವು ಶಾಲೆಗಳ ವಿದ್ಯಾರ್ಥಿಗಳು ಅನ್ಯ ಶಾಲೆಗಳಲ್ಲಿನ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯುತ್ತಿದ್ದರು.
ಆದರೆ ವಿದ್ಯಾರ್ಥಿಗಳ ಪ್ರಯಾಣದ ಪ್ರಯಾಸ ತಪ್ಪಿಸುವ ಉದ್ದೇಶದಿಂದ ಅವರದ್ದೇ ಶಾಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಇದರೊಂದಿಗೆ ಲಾಕ್‌ಡೌನ್‌ಗಿಂತ ಮೊದಲು ಪರೀಕ್ಷೆ ನಡೆದಿರುವ ಪತ್ರಿಕೆಗಳ ಮೌಲ್ಯಮಾಪನ ಪ್ರಗತಿಯಲ್ಲಿದ್ದು, ಜುಲೆ„ ಅಂತ್ಯದ ವೇಳೆಗೆ ಎರಡೂ ತರಗತಿಗಳ ಫಲಿತಾಂಶ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.
ಪರೀಕ್ಷೆ ವೇಳೆ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಇರುವಂತೆ ನೋಡಿಕೊಳ್ಳುವುದು ಆಯಾ ಶಾಲಾಡಳಿತದ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರಬೇಕು ಮತ್ತು ಸ್ಯಾನಿಟೈಸರ್ ಬಾಟಲಿಯನ್ನು ತಾವೇ ತರಬೇಕು ಎಂದು ಡಿಡಿ ನ್ಯೂಸ್ ವಾಹಿನಿಯಲ್ಲಿ ನಡೆದ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.