Advertisement

15 ದಿನಗಳಲ್ಲಿ ಮೇಕೆದಾಟುವಿಗೆ ಯೋಜನಾ ವರದಿ ಸಿದ್ಧ

11:46 AM May 04, 2017 | Harsha Rao |

ಬೆಂಗಳೂರು: ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಇನ್ನು 15 ದಿನಗಳಲ್ಲಿ ಅಂತಿಮಗೊಳ್ಳಲಿದ್ದು, ನಂತರ ಅಣೆಕಟ್ಟೆ
ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ
ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಗ್ರ ಯೋಜನಾ ವರದಿ ಬಂದ ಕೂಡಲೇ ಅದಕ್ಕೆ ಸಂಪುಟದ ಅನುಮೋದನೆ ಪಡೆಯಲಾಗುವುದು. ಬಳಿಕ ಕೇಂದ್ರ ಜಲ ಆಯೋಗ, ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಮತ್ತು ತಮಿಳುನಾಡು ರಾಜ್ಯಕ್ಕೆ ಕಳುಹಿಸಿಕೊಡಲಾಗುವುದು
ಎಂದು ತಿಳಿಸಿದರು.

Advertisement

ಕಾವೇರಿ ನದಿಯಿಂದ ಪ್ರತಿ ವರ್ಷ ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಬೇಕು. ಆದರೆ, ಪ್ರತಿ ವರ್ಷ ಸರಾಸರಿ 80 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿಯುತ್ತದೆ. ಈ ಹೆಚ್ಚುವರಿ ನೀರನ್ನು ತಡೆಹಿಡಿದು ಬೆಂಗಳೂರಿಗೆ ನೀರು ಪೂರೈಸಲು ಮತ್ತು ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲು ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸಲಾಗುತ್ತಿದೆ. ವಿದ್ಯುತ್‌ ಉತ್ಪಾದನೆ ಮತ್ತು ಬೆಂಗಳೂರಿಗೆ ನೀರು ಪೂರೈಸುವ ಯೋಜನೆ ಇದಾಗಿರುವುದರಿಂದ ಕಾಮಗಾರಿಗೆ ಜಲ ಮಂಡಳಿ ಮತ್ತು ಇಂಧನ ಇಲಾಖೆಯಿಂದ ಆರ್ಥಿಕ ಸಹಕಾರ ಪಡೆಯಲಾಗುವುದು ಎಂದರು.

ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲ ಇರುವುದರಿಂದ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಏನೇ ಆದರೂ ಯೋಜನೆ ಜಾರಿಗೊಳಿಸಿಯೇ ಸಿದ್ಧ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ: ರಾಜ್ಯದಲ್ಲಿ ಅತಿ ಹೆಚ್ಚು ಮರಳು ಲಭ್ಯವಿರುವ ಕರಾವಳಿ ಭಾಗದ ದಕ್ಷಿಣ
ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲಾಗುತ್ತಿದ್ದು, ಈಗಾಗಲೇ ಕರಡು
ನೀತಿ ಅಂತಿಮಗೊಂಡಿದೆ. ಶೀಘ್ರದಲ್ಲೇ ಅದನ್ನು ಸಚಿವ ಸಂಪುಟದ ಮುಂದೆ ತರಲಾಗುವುದು ಎಂದರು.

ರಾಜ್ಯದಲ್ಲಿ ಏಕರೂಪದ ಮರಳು ನೀತಿ ಇರುವುದರಿಂದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮರಳು ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ ಭಾಗದ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲು ತಮ್ಮ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಇದೀಗ ಮರಳು ನೀತಿಯ ಕರಡು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಸಂಪುಟದ ಮುಂದೆ ತರಲಾಗುವುದು. ಹೊಸ ನೀತಿ ಜಾರಿಯಾದರೆ ಆ ಭಾಗದಲ್ಲಿ ಹೆಚ್ಚು ಮರಳು ಲಭ್ಯವಾಗಲಿದೆ ಎಂದು ಹೇಳಿದರು.

Advertisement

ಮರಳು ಸಮಸ್ಯೆ ಬಗೆಹರಿಸಲು ಎಂ-ಸ್ಯಾಂಡ್‌ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಎಂ-ಸ್ಯಾಂಡ್‌ ತೆಗೆಯಲು ಬ್ಲಾಕ್‌ಗಳನ್ನು ಗುತ್ತಿಗೆಗೆ ನೀಡುವ ಕಾರ್ಯ ಪೂರ್ಣಗೊಂಡಿದೆ. ಆದರೂ ಕೆಲವೊಂದು ಕಡೆ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಮತ್ತೆ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next