Advertisement

ಮೀಸಲಾತಿಗಾಗಿ ಮರಾಠ ಸಮುದಾಯದ ಬೃಹತ್‌ ಪ್ರತಿಭಟನೆ;ಮುಂಬಯಿ ಸ್ತಬ್ಧ 

01:42 PM Aug 09, 2017 | |

ಮುಂಬಯಿ: ಮರಾಠಾ ಸಮುದಾಯಕ್ಕೆ ಸರಕಾರ ಮೀಸಲಾತಿ ಒದಗಿ ಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬುಧವಾರ  ಮರಾಠ ಸಮುದಾಯದ ಲಕ್ಷಾಂತರ ಜನರು ನಗರದ ಆಜಾದ್‌ ಮೈದಾನದಲ್ಲಿ ಬೃಹತ್‌ ಮರಾಠ ಕ್ರಾಂತಿ ಮೋರ್ಚಾ ನಡೆಸುತ್ತಿದ್ದು ಮುಂಬಯಿ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. 

Advertisement

 ಮೌನ ಸ್ವರೂಪದ ಮಹಾ ಮೋರ್ಚಾ ಬೆಳಗ್ಗೆ 11 ಗಂಟೆಗೆ ಬೈಕುಲಾದ ವೀರಮಾತಾ ಜೀಜಾಬಾಯಿ ಭೋಸ್ಲೆ ಉದ್ಯಾನದಿಂದ  ಆರಂಭವಾಗಿದ್ದು, ರಾಣಿಬಾಗ್‌ನಿಂದ ಸಾಗಿ ಮೋರ್ಚಾ ಕ್ಯಾ| ಅಣ್ಣಾಸಾಹೇಬ್‌ ಪಾಟೀಲ್‌ ಸೇತುವೆ, ಖಡಾ ಪಾರ್ಸಿ, ಇಸ್ಮಾಯಿಲ್‌ ಮರ್ಚೆಂಟ್‌ ವೃತ್ತ, ಜೆ.ಜೆ.ಮೇಲ್ಸೆತುವೆ, ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ ಮಾರ್ಗವಾಗಿ ಬಂದು ಆಜಾದ್‌ ಮೈದಾನಕ್ಕೆ ತಲುಪಿ ಅಲ್ಲಿ ಸಂಪನ್ನಗೊಳ್ಳುತ್ತಿದೆ. ಈ ಮಹಾ ಮೋರ್ಚಾವು ಘೋಷಣೆ ಮತ್ತು ಭಾಷಣರಹಿತವಾಗಿ ನಡೆಯುತ್ತಿದೆ. 

ಮುಂಬಯಿಯ ಇದುವರೆಗಿನ ಇತಿಹಾಸದಲ್ಲಿ ಇದು ಅತ್ಯಂತ ಬೃಹತ್‌ ಮೋರ್ಚಾ ಆಗಿರಲಿದೆ. ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 57 ಮೋರ್ಚಾಗಳು ನಡೆದಿದ್ದು 58ನೇ ಬೃಹತ್‌ ಮೋರ್ಚಾ ಮುಂಬಯಿಯಲ್ಲಿ ನಡೆಯುತ್ತಿದೆ. 

ಮೋರ್ಚಾ ನಡೆಸಲು ಮಹಾನಗರ ಪಾಲಿಕೆ, ಪೊಲೀಸ್‌, ಅಗ್ನಿಶಾಮಕ ದಳ, ಟ್ರಾಫಿಕ್‌ ಪೊಲೀಸ್‌ ಮತ್ತು ಇತರ ಆವಶ್ಯಕ ಆಡಳಿತ ವರ್ಗದಿಂದ ಪರವಾನಿಗೆಯನ್ನು ತೆಗದುಕೊಳ್ಳಲಾಗಿದೆ. ವಿವಿಧ ಸಾಮಾಜಿಕ ಸಂಸ್ಥೆಗಳು, ಗಣೇಶೋತ್ಸವ ಹಾಗೂ ದಹಿಹಂಡಿ ಮಂಡಳಿಗಳು, ಮುಂಬಯಿನ ಡಬ್ಟಾವಾಲಾ, ರೇಲ್‌ ಮರಾಠದ ಸ್ವಯಂಸೇವಕರು, ಮರಾಠ ಮೆಡಿಕೋ ಅಸೋಸಿಯೇಶನ್‌, ಛತ್ರಪತಿ ಶಿವಾಜಿ ಮುಸ್ಲಿಂ ಬ್ರಿಗೇಡ್‌ ಸೇರಿದಂತೆ ರಾಜಕೀಯ, ಮುಸ್ಲಿಂ ಮತ್ತು ದಲಿತ ಸಂಘಟನೆಗಳು ಮೋರ್ಚಾಕ್ಕೆ ಬೆಂಬಲ ನೀಡಿವೆ ಎಂದು ಪವಾರ್‌ ಹೇಳಿದರು.

ಚಹಾ, ಉಪಾಹಾರ ವ್ಯವಸ್ಥೆ
ಮೋರ್ಚಾದಲ್ಲಿ ಭಾಗವಹಿಸುವ ಆಂದೋಲನ ಕಾರರಿಗೆ ಚಹಾ, ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ ಮೊಬೈಲ್‌ ಶೌಚಾಲಯಗಳ ಮತ್ತು ವೈದ್ಯಕೀಯ ಸೇವೆಯ ವ್ಯವಸ್ಥೆ ಮಾಡಲಾಗಿದೆ. ಮೋರ್ಚಾಕ್ಕೆ ಮಾರ್ಗದರ್ಶನ ನೀಡಲು 6,000 ಸ್ವಯಂಸೇವಕರನ್ನು ನೇಮಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗಾಗಿ ಟ್ರಾಫಿಕ್‌ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ.

Advertisement

ಬೃಹತ್‌ ಮರಾಠ ಕ್ರಾಂತಿ ಮೋರ್ಚಾ ನಿಮಿತ್ತ ದಕ್ಷಿಣ ಮುಂಬಯಿಯಲ್ಲಿನ ಶಾಲಾ- ಕಾಲೇಜು ಗಳಿಗೆ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ ರಜೆ ಸಾರಿದ್ದಾರೆ.  ದಕ್ಷಿಣ ಮುಂಬಯಿಯಲ್ಲಿನ ಸಾಯನ್‌, ಮಾಹೀಮ್‌, ದಾದರ್‌, ವರ್ಲಿ ಮತ್ತು ಬೈಕುಲಾದಿಂದ ಕುಲಾಬಾ ಪರಿಸರದಲ್ಲಿನ ಶಾಲೆಗಳು ಸಹ ಬಂದ್‌ ಮಾಡಲಾಗಿದೆ. 

ಮೋರ್ಚಾದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಜನರು ಮುಂಬಯಿಗೆ ಆಗಮಿಸಿದ್ದಾರೆ. ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ ಮತ್ತು ಕೊಂಕಣ ಭಾಗದ ವಿವಿಧ ಜಿಲ್ಲೆಗಳಿಂದ ಜನರನ್ನು ಹೊತ್ತು ಸಾವಿರಾರು ವಾಹನಗಳು ಮುಂಬಯಿಯಲ್ಲಿ ಪ್ರವೇಶಿಸಿದ್ದು, ಟ್ರಾಫಿಕ್‌ ಜ್ಯಾಮ್‌ ಉಂಟಾಗಿದೆ. ನವಿ ಮುಂಬಯಿಯ ವಿವಿಧ ಸ್ಥಳಗಳಲ್ಲಿ ವಾಹನಗಳಿಗಾಗಿ ಜಿಲ್ಲಾವಾರು ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

 ನೀತಿ ಸಂಹಿತೆ 
ಮುಂಬಯಿ ಮರಾಠ ಕ್ರಾಂತಿ ಮೋರ್ಚಾ ಮೌನವಾಗಿದ್ದು, ಯಾವೊಬ್ಬ ಪ್ರತಿಭಟನ ಕಾರ ಘೋಷಣೆ ಕೂಗುವುದಿಲ್ಲ. ಭಾಷಣ ಮಾಡುವುದಿಲ್ಲ.  

ಮೋರ್ಚಾಕ್ಕೆ ಸಂಬಂಧಿಸಿದ ಅಧಿಕೃತ ಬ್ಯಾನರ್‌ಗಳು ಹೊರತುಪಡಿಸಿ ಯಾವುದೇ ರಾಜಕೀಯ, ವೈಯಕ್ತಿಕ ಸಂಸ್ಥೆ ಮತ್ತು ಸಂಘಟನೆಯ ಬ್ಯಾನರ್‌ ಗಳು ಇರುವುದಿಲ್ಲ.

 ಯಾವುದೇ ಜಾತಿ ಅಥವಾ ಧರ್ಮದ ವಿರುದ್ಧದ ಘೋಷಣೆ ಅಥವಾ ಬೇಡಿಕೆಗಳುಳ್ಳ ಬ್ಯಾನರ್‌ಗಳನ್ನು ಮೋರ್ಚಾದಲ್ಲಿ ಪ್ರದರ್ಶಿಸುವಂತಿಲ್ಲ.

ಮೋರ್ಚಾದಲ್ಲಿ ಸ್ವಯಂ ಶಿಸ್ತು ಪಾಲಿಸುವಾಗ ಪೊಲೀಸರಿಗೆ ಸಹಕರಿಸಲಾಗುವುದು. 

ಮದ್ಯ ಸೇವನೆ ಮಾಡಿದ ಆಂದೋಲನಕಾರರಿಗೆ ಮೋರ್ಚಾದಲ್ಲಿ ಪಾಲ್ಗೊಳ್ಳುವಂತಿಲ್ಲ.
ಮೋರ್ಚಾದಿಂದ ನಗರ ಅಸ್ವತ್ಛವಾಗದಂತೆ ನೋಡಿಕೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next