ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಶುಕ್ರವಾರ (ಡಿ.27) ರಂದು ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾವನ್ನಪಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಹಫೀಜ್ ಸಯೀದ್ ನ ಸೋದರ ಮಾವನಾಗಿದ್ದ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಜಮಾತ್ ಉದ್ ದಾವಾದ ಉಪ ಮುಖ್ಯಸ್ಥನಾಗಿದ್ದ.
ಸುದ್ದಿ ಸಂಸ್ಥೆ ಮಾಹಿತಿ ಪ್ರಕಾರ ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ವೇಳೆ ಸಕ್ಕರೆ ಅಂಶ ಹೆಚ್ಚಿದ್ದ ಕಾರಣ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಮೇ 2019 ರಲ್ಲಿ, ಮಕ್ಕಿಯನ್ನು ಪಾಕಿಸ್ತಾನ ಸರ್ಕಾರವು ಬಂಧಿಸಿ ಲಾಹೋರ್‌ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. 2020 ರಲ್ಲಿ, ಪಾಕಿಸ್ತಾನಿ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಿ ಜೊತೆಗೆ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 2023 ರ ಜನವರಿಯಲ್ಲಿ, ಮಕ್ಕಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) “ಜಾಗತಿಕ ಭಯೋತ್ಪಾದಕ” ಎಂದು ಘೋಷಣೆ ಮಾಡಿತು.
166 ಜನರ ಸಾವಿಗೆ ಕಾರಣವಾದ 26/11 ಮುಂಬೈ ಭಯೋತ್ಪಾದಕ ದಾಳಿಗೆ ಹಣಕಾಸು ಒದಗಿಸುವಲ್ಲಿ ಮಕ್ಕಿ ಭಾಗಿಯಾಗಿದ್ದ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು ಒಂಬತ್ತು ಭಯೋತ್ಪಾದಕನ್ನು ಕೊಲ್ಲಲಾಗಿತ್ತು ಓರ್ವ ಭಯೋತ್ಪಾದಕ ಅಮೀರ್ ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಮುಂಬೈ ದಾಳಿಯ ಹೊರತಾಗಿ ಡಿಸೆಂಬರ್ 22, 2000 ರಲ್ಲಿ ನಡೆದ ಕೆಂಪು ಕೋಟೆ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ.
ಇದನ್ನೂ ಓದಿ: ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ