ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗಳಲ್ಲಿ ಒಬ್ಬರಾಗಿದ್ದ ಜಿ.ಪಂ. ಮಾಜಿ ಸದಸ್ಯ ಬಾಬು ಹೆಗ್ಡೆ, ಮತ್ತೋರ್ವ ಮಾಜಿ ಸದಸ್ಯ ಶಂಕರ ಪೂಜಾರಿ ಸಹಿತ ಹಲವು ಮುಖಂಡರು ರವಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬೈಂದೂರಿನ ಯಡ್ತರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರು ಬಿಜೆಪಿ ತೊರೆದು ಬಂದ ಪ್ರಮುಖರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಹಿರಿಯ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಬಾಬು ಹೆಗ್ಡೆ ತೆಗ್ಗರ್ಸೆ, ಜಿ.ಪಂ. ಮಾಜಿ ಸದಸ್ಯ ಶಂಕರ್ ಪೂಜಾರಿ, ತಾ.ಪಂ. ಮಾಜಿ ಸದಸ್ಯರಾದ ಸದಾಶಿವ ಪಡುವರಿ, ದಸ್ತಗಿರಿ ಸಾಹೇಬ್, ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಶೆಟ್ಟಿ ಗ್ರಾಮ ಮಟ್ಟದ ನಾಯಕರು ಹಾಗೂ ಅವರೊಂದಿಗೆ ನೂರಾರು ಮಂದಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭ ಮಾತನಾಡಿದ ಬಾಬು ಹೆಗ್ಡೆ, 35 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿ ಪಕ್ಷದ ಶಾಸಕರು, ಸಂಸದರ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. 2013ರಲ್ಲಿ ಪಕ್ಷದ ಟಿಕೆಟ್ ನೀಡುವುದಾಗಿ ಸುಳ್ಳು ಹೇಳಿದರು. 2018ರಲ್ಲಿ ಟಿಕೆಟ್ ನೀಡಿಲ್ಲ. ಈ ಬಾರಿಯೂ ಆಶ್ವಾಸನೆ ನೀಡಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಲಾಯಿತು. ಬಿಜೆಪಿ ನನಗೆ ನಂಬಿಸಿ ಮೋಸ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನನ್ನ ಸ್ವಂತ ಮನೆ. ಮತ್ತೆ ಆ ಮನೆಗೆ ವಾಪಾಸು ಬಂದಿದ್ದೇನೆ ಎಂದು ಜಿ.ಪಂ. ಸದಸ್ಯ ಶಂಕರ ಪೂಜಾರಿ ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ಮುಖಂಡರಾದ ಎಂ.ಎ. ಗಫೂರ್, ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.