Advertisement

Congress; ಇಂದಿನಿಂದ ಜೈ ಬಾಪು, ಜೈ ಭೀಮ ಅಭಿಯಾನ

12:51 AM Jan 03, 2025 | Team Udayavani |

ಹೊಸದಿಲ್ಲಿ: ಕಳೆದ ವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ವೇಳೆ ಘೋಷಿಸಿದಂತೆ ಕಾಂಗ್ರೆಸ್‌ನ “ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಮಹಾ ಅಭಿಯಾನ’ ಶುಕ್ರವಾರ ಆರಂಭವಾಗಲಿದೆ.

Advertisement

ದೇಶದ ಎಲ್ಲ ರಾಜ್ಯಗಳು, ಜಿಲ್ಲೆಗಳು, ಹಳ್ಳಿಗಳು ಹಾಗೂ ಬ್ಲಾಕ್‌ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಬೇರು ಮಟ್ಟದ ನಾಯಕರು ಇದರ ನೇತೃತ್ವ ವಹಿಸಲಿದ್ದಾರೆ. ಇದರ ಅಂಗವಾಗಿ ವಿಚಾರ ಸಂಕಿರಣಗಳು, ಸಾರ್ವಜನಿಕ ಸಭೆಗಳು, ರ್ಯಾಲಿಗಳೂ ನಡೆಯಲಿವೆ. ಜ.26ರಂದು ಅಂಬೇಡ್ಕರ್‌ ಜನ್ಮಸ್ಥಳವಾದ ಮಧ್ಯಪ್ರದೇಶದ ಮಹೂವಿನಲ್ಲಿ ಬೃಹತ್‌ ಸಾರ್ವಜನಿಕ ರ್ಯಾಲಿಯೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಮಾಹಿತಿ ನೀಡಿದ್ದಾರೆ.
ಡಿ.27ರಂದೇ ಈ ಅಭಿಯಾನಕ್ಕೆ ಬೆಳಗಾವಿಯಿಂದಲೇ ಚಾಲನೆ ನೀಡಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ನಿಧನ ಹಾಗೂ 7 ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು. ಈಗ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದೂ ಜೈರಾಂ ತಿಳಿಸಿದ್ದಾರೆ.

ಇದೇ ವೇಳೆ, ಪ್ರಸಕ್ತ ವರ್ಷದ ಜ.26ರಿಂದ 2026ರ ಜ.26ರ ವರೆಗೆ ಕಾಂಗ್ರೆಸ್‌ ರಾಷ್ಟ್ರಮಟ್ಟದ ಸಂವಿಧಾನ ಬಚಾವೋ ರಾಷ್ಟ್ರೀಯ ಪಾದಯಾತ್ರೆಯನ್ನೂ ನಡೆಸಲಿದ್ದು, ಅದರಲ್ಲಿ ಪಕ್ಷದ ಹಲವು ನಾಯಕರು ಭಾಗಿಯಾಗಲಿದ್ದಾರೆ. ಇದು ರಿಲೇ ಮಾದರಿಯಲ್ಲಿ ಒಂದು ಗ್ರಾಮದಿಂದ ಮತ್ತೂಂದು ಗ್ರಾಮ, ಒಂದು ಪಟ್ಟಣದಿಂದ ಮತ್ತೂಂದು ಪಟ್ಟಣಕ್ಕೆ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ. 2025ರ ಎಪ್ರಿಲ್‌ನಲ್ಲಿ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ ಹಮ್ಮಿಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಸತತವಾಗಿ ದಾಳಿ ನಡೆಸುತ್ತಿದೆ ಎನ್ನುವುದು ಕಾಂಗ್ರೆಸ್‌ ಆರೋಪವಾಗಿದೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇತ್ತೀಚೆಗೆ ಡಾ| ಬಿ.ಆರ್‌. ಅಂಬೇಡ್ಕರ್‌ ಕುರಿತು ವಿವಾದಿತ ಹೇಳಿಕೆಯನ್ನೂ ನೀಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಈಗ ಕಾಂಗ್ರೆಸ್‌ ಈ ಅಭಿಯಾನಕ್ಕೆ ಮುನ್ನುಡಿ ಬರೆದಿದೆ.

ಅಭಿಯಾನ ಹೇಗೆ?
ಅಂಬೇಡ್ಕರ್‌ಗೆ ಸಚಿವ ಅಮಿತ್‌ ಶಾ ಅವಮಾನ ಹಿನ್ನೆಲೆ ಅಭಿಯಾನ
ದೇಶ, ರಾಜ್ಯ, ಜಿಲ್ಲೆ, ಬ್ಲಾಕ್‌ ಮಟ್ಟದಲ್ಲಿ ಹಲವು ಕಾರ್ಯಕ್ರಮ
ವಿಚಾರ ಸಂಕಿರಣಗಳು, ಸಾರ್ವಜನಿಕ ಸಭೆಗಳು, ರ್ಯಾಲಿ ಆಯೋಜನೆ
ಜ.26ರಂದು ಮಧ್ಯಪ್ರದೇಶದ ಮಹೂವಿನಲ್ಲಿ ಸಮಾರೋಪ
ಜ.26ರಿಂದ 1 ವರ್ಷ ಕಾಲ ಸಂವಿಧಾನ ಬಚಾವೋ ಪಾದಯಾತ್ರೆ
ಈ ವರ್ಷದ ಎಪ್ರಿಲ್‌ನಲ್ಲಿ ಎಐಸಿಸಿ ಅಧಿವೇಶನ

Advertisement
Advertisement

Udayavani is now on Telegram. Click here to join our channel and stay updated with the latest news.

Next